ಬಾರ್ಬಡೋಸ್: ಕಳೆದ ಶನಿವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ 13 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವಂತೆ ಮಾಡಿತ್ತು. ಜತೆಗೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಐತಿಹಾಸಿಕ ಗೆಲುವಿನ ಬಳಿಕ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಬಾರ್ಬಡೋಸ್ ಕ್ರೀಡಾಂಗಣದ ಪಿಚ್ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ನಾಯಕತ್ವದಲ್ಲಿ ಮೊದಲ ವಿಶ್ವಕಪ್ ಗೆದ್ದ ಖುಷಿಯಲ್ಲಿ ರೋಹಿತ್ ಪಂದ್ಯ ಮುಕ್ತಾಯದ ಬಳಿಕ ತುಂಬಾ ಭಾವುಕರಾಗಿ ಕಂಡು ಬಂದಿದ್ದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಬಾರ್ಬಡೋಸ್ ಕ್ರೀಡಾಂಗಣದ ಪಿಚ್ನಿಂದ ಒಂದು ಚಿಟಿಕೆ ಮಣ್ಣನ್ನು ತಿಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು.
ಇದೀಗ ಟಿ20 ವಿಶ್ವಕಪ್ ಜತೆಗೆ ಫೋಟೋಶೂಟ್ ನಡೆಸಿದ ವೇಳೆ ರೋಹಿತ್ ಪಂದ್ಯದ ಬಳಿಕ ಮಣ್ಣು ತಿಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್ನ ಮಣ್ಣು ತಿಂದೆ” ಎಂದು ಹೇಳಿದರು. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿದಾಯ ಹೇಳಿದ ರೋಹಿತ್
ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್ ಗೆದ್ದ ರೋಹಿತ್ ಗೆಲುವಿನ ಬಳಿಕ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಕೂಡ ರೋಹಿತ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿ ಕೂಡ ಆಡುವ ಸಾಧ್ಯತೆ ಇದೆ. ಈ ಟೂರ್ನಿ ಆಡಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ಯೋಜನೆ ಹಾಕಿಕೊಂಡಂತಿದೆ.