Site icon Vistara News

Rohit Sharma: ಹಾರ್ದಿಕ್ ನಾಯಕತ್ವದಿಂದ ಬೇಸರ; ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ ರೋಹಿತ್​!

rohit sharma

ಮುಂಬಯಿ: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಆಡಿದ ಎಲ್ಲ ಮೂರು ಪಂದ್ಯಗಳನ್ನು ಹೀನಾಯವಾಗಿ ಸೋತಿದೆ. ತಂಡದ ನಾಯಕ ಹಾರ್ದಿಕ್​ ಪಾಂಡ್ಯ(hardik pandya) ಅವರು ತೆಗೆದುಕೊಳ್ಳುವ ಕೆಲ ಕೆಟ್ಟ ನಿರ್ಧಾರಗಳಿಂದ ತಂಡಕ್ಕೆ ಈ ಸ್ಥಿತಿ ಎದುರಾಗಿದೆ ಎನ್ನುವುದು ಮುಂಬೈ ಅಭಿಮಾನಿಗಳ ಆರೋಪವಾಗಿದೆ. ಪಾಂಡ್ಯ ವರ್ತನೆ ಬಗ್ಗೆ ರೋಹಿತ್​ ಶರ್ಮ(Rohit Sharma) ಬೇಸರಗೊಂಡಿದ್ದು ಮುಂದಿನ ಆವೃತ್ತಿಯಲ್ಲಿ ಮುಂಬೈ ಪರ ಆಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ನ್ಯೂಸ್ 24 ಸ್ಪೋರ್ಟ್ಸ್ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಅತೃಪ್ತರಾಗಿದ್ದಾರೆ ಎಂದು ಮುಂಬೈ ಆಟಗಾರರೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ಬಿರುಕು ಮೂಡಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.  ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌(Mumbai Indians) ತಂಡ ಟ್ರೇಡಿಂಗ್​ ಮೂಲಕ ಖರೀದಿಸಿ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ರೋಹಿತ್​ ಈ ಬಾರಿ ಮುಂಬೈ ಪರವೇ ಆಡಿದ್ದರು. ಇದೀಗ ಅವರು ಮುಂದಿನ ಆವೃತ್ತಿಯಲ್ಲಿ ಮುಂಬೈ ತೊರೆದು ಬೇರೆ ಫ್ರಾಂಚೈಸಿ ಪರ ಆಡಲಿದ್ದಾರೆ ಎನ್ನುವ ಮಾತುಗಳು ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ IPL 2024 Points Table: ರಾಜಸ್ಥಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​

ರೋಹಿತ್​ ಅಭಿಮಾನಿಗಳು ಕೂಡ ಮುಂಬೈ ತೊರೆದು ಬೇರೆ ತಂಡದ ಪರ ಆಡುವಂತೆ ಒತ್ತಾಯಿಸುತ್ತಿದ್ದಾರೆ. ಜಸ್​ಪ್ರೀತ್​ ಬುಮ್ರಾ ಕೂಡ ಪಾಂಡ್ಯ ನಾಯಕತ್ವದ ಬಗ್ಗೆ ಅತೃಪ್ತರಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ  ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಆಟಗಾರ, ಮುಂಬೈ ಇಂಡಿಯನ್ಸ್​ ಪರವೂ ಆಡಿರುವ ಅಂಬಾಟಿ ರಾಯುಡು(Ambati Rayudu) ಅವರು ರೋಹಿತ್​ ಶರ್ಮ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸಬೇಕು ಎಂದು ಹೇಳಿದ್ದರು. ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯುವ ಕಾರಣ ರೋಹಿತ್​ ಬೇರೆ ಫ್ರಾಂಚೈಸಿ ಪರ ಆಡುವ ಸಾಧ್ಯತೆಯೂ ಅಧಿಕವಾಗಿದೆ.

“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ತೆಂಡೂಲ್ಕರ್​ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್​ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್​ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು. ಗುಜರಾತ್​ ತಂಡದ ನಾಯಕನಾಗಿದ್ದ ಪಾಂಡ್ಯ ಅವರನ್ನು ಟ್ರೇಡಿಂಗ್​ ಮೂಲಕ ಮುಂಬೈಗೆ ಸೇರಿಸಿ ನಾಯಕತ್ವ ನೀಡಲಾಗಿತ್ತು.

ಈಗಾಗಲೇ ಮುಂಬೈ ತಂಡದ ಮೂರು ಸೋಲಿನಿಂದ ಕೆರಳಿರುವ ಅಭಿಮಾನಿಗಳು ಮುಂದಿನ ಪಂದ್ಯದಲ್ಲಿಯೂ ಇದೇ ರೀತಿಯ ಫಲಿತಾಂಶ ಕಂಡು ಬಂದು ಟೂರ್ನಿಯಿಂದ ಹೊರಬಿದ್ದರೆ ಸೋಲಿನ ಎಲ್ಲ ಹೊಣೆಯನ್ನು ಪಾಂಡ್ಯ ತಲೆಗೆ ಕಟ್ಟುವುದಂತು ನಿಜ.

Exit mobile version