ಮುಂಬಯಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಇನ್ನುಳಿದ ಮೂರು ಐಪಿಎಲ್(IPL 2024) ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಇಂದು ನಡೆಯುವ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ಎದುರಿನ ಪಂದ್ಯದಲ್ಲಿಯೂ ರೋಹಿತ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.
ಕಳೆದ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ರೋಹಿತ್ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆ ಪಂದ್ಯದಲ್ಲಿ ಕೇವಲ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಫೀಲ್ಡಿಂಗ್ ಮಾಡಿರಲಿಲ್ಲ. ರೋಹಿತ್ ಗಾಯದ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ತಂಡದ ಹಿರಿಯ ಸ್ಪಿನ್ನರ್ ಚಾವ್ಲಾ ಮಾಹಿತಿ ನೀಡಿದ್ದರು. ಬೆನ್ನು ನೋವು ಸಣ್ಣ ಪ್ರಮಾಣದ್ದಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ ಎಂದಿದ್ದರು.
ರೋಹಿತ್ ಶರ್ಮ ಈ ಬಾರಿಯ ಐಪಿಎಲ್ನಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿಲ್ಲ. ಆಡಿದ 11 ಇನಿಂಗ್ಸ್ಗಳಿಂದ ಕೇವಲ 326 ರನ್ ಮಾತ್ರ ಗಳಿಸಿದ್ದಾರೆ. ಅವರ ಈ ಬ್ಯಾಟಿಂಗ್ ವೈಫಲ್ಯಕ್ಕೆ ನಾಯಕತ್ವ ಬದಲಾವಣೆಯೂ ಕೂಡ ಕಾರಣವಾಗಿರಬಹುದು. 5 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರೂ ಏಕಾಏಕಿ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಅಸಮಾಧಾನವೂ ಇರಬಹುದು. ಮುಂದಿನ ಆವೃತ್ತಿಯಲ್ಲಿ ಮುಂಬೈ ತೊರೆದು ಬೇರೆ ತಂಡದ ಪರ ಆಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.
ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಸಂಘಟಿತ ಪ್ರದರ್ಶನ ತೋರದೇ ಹೋದಲ್ಲಿ ಈ ಪಂದ್ಯದಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ನೂತನ ನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟಿಮ್ ಡೇವಿಡ್ ಹೀಗೆ ಘಟಾನುಘಟಿ ಆಟಗಾರರು ಪ್ರತಿ ಪಂದ್ಯದಲ್ಲಿಯೂ ಘೋರ ವೈಫಲ್ಯ ಎದುರಿಸುತ್ತಿದ್ದಾರೆ. ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿದ ಉಳಿದೆಲ್ಲರು ಲೆಕ್ಕಭರ್ತಿಗೆ ಆಡಿದಂತೆ ಆಡುತ್ತಿದ್ದಾರೆ.
ಇದನ್ನೂ ಓದಿ IPL 2024 Points Table: ರಾಜಸ್ಥಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
ಯಾರೂ ಕೂಡ ತಂಡಕ್ಕಾಗಿ ಹಾಗೂ ಉತ್ಸಾಹ ಭರಿತವಾಗಿ ಆಡುತ್ತಿಲ್ಲ. 11 ಪಂದ್ಯಗಳಿಂದ ಕೇವಲ 3 ಗೆಲುವು ಸಾಧಿಸಿ 6 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿದೆ. ಕಳೆದ 16 ಆವೃತ್ತಿಯ ಐಪಿಎಲ್ ಟೂರ್ನಿಯನ್ನು ನೋಡುವುದಾದರೆ ಮುಂಬೈ ಈ ಸ್ಥಿತಿ ತಲುಪಿದ್ದು ಇದೇ ಮೊದಲು.
ಸನ್ರೈಸರ್ಸ್ ಹೈದರಾಬಾದ್ಗೆ ಇದು ಮಹತ್ವದ ಪಂದ್ಯ. ಸದ್ಯ 12 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಕಮಿನ್ಸ್ ಪಡೆ ಕಳೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ತಂಡಕ್ಕೆ ಲಕ್ ಕೂಡ ಇದೆ. ಹೆಡ್ ಮತ್ತು ಅಭಿಷೇಕ್ ಶರ್ಮಾ ಪವರ್ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಮಾರ್ಕ್ರಮ್, ಕ್ಲಾಸೆನ್ ನಿತೇಶ್ ರೆಡ್ಡಿ, ಅಬ್ದುಲ್ ಸಮದ್ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.