ಕೊಲಂಬೊ: ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರು ಸಚಿನ್ ತೆಂಡೂಲ್ಕರ್(Sachin Tendulkar) ಅವರ ಏಷ್ಯಾಕಪ್ನ ದಾಖಲೆಯೊಂದನ್ನು ಮುರಿದಿದ್ದಾರೆ.
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಗಮನ ಸೆಳೆದರು. ಮೊದಲ ಮುಖಾಮುಖಿಯಲ್ಲಿ ಶಾಹೀನ್ ಅಫ್ರಿದಿ ಓವರ್ನಲ್ಲಿ ರನ್ ಗಳಿಸಲು ಪರದಾಡಿದ ಅವರು ಈ ಪಂದ್ಯದಲ್ಲಿ ಸತತ ಬೌಂಡರಿ ಮೂಲಕ ಚಳಿ ಬಿಡಿಸಿದರು. ಒಟ್ಟು 49 ಎಸೆತ ಎದುರಿಸಿ 4 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 56 ರನ್ ಗಳಿಸಿ ಶಾದಾಬ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಇದು ರೋಹಿತ್ ಅವರು ಈ ಟೂರ್ನಿಯಲ್ಲಿ ಬಾರಿಸಿದ ಸತತ ಎರಡನೇ ಅರ್ಧಶತಕ. ಕಳೆದ ನೇಪಾಳ ವಿರುದ್ಧದ ಪಂದ್ಯದಲ್ಲಿಯೂ ರೋಹಿತ್ ಅರ್ಧಶತಕ ಬಾರಿಸಿದ್ದರು.
ಉತ್ತಮ ಜತೆಯಾಟ
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತಕ್ಕೆ ರೋಹಿತ್ ಮತ್ತು ಗಿಲ್ ಸೇರಿ ಕೊಂಡು ಉತ್ತಮ ಆರಂಭ ಒದಗಿಸಿದರು. ಪಾಕ್ ಬೌಲರ್ಗಳ ಮೇಲೆರಗಿ ಮೊದಲ ವಿಕೆಟ್ಗೆ 121 ರನ್ ರಾಶಿ ಹಾಕಿದರು. ಶುಭಮನ್ ಗಿಲ್ 52 ಎಸೆತಗಳಿಂದ 58 ರನ್ ಬಾರಿಸಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು.
ಸಚಿನ್ ದಾಖಲೆ ಪತನ
ರೋಹಿತ್ ಅರ್ಧಶತಕ ಬಾರಿಸುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ದಾಖಲೆಯೊಂದು ಪತನಗೊಂಡಿತು. ಏಷ್ಯಾಕಪ್ ಟೂರ್ನಿಯಲ್ಲಿ(ಟಿ20 ಮತ್ತು ಏಕದಿನ) ರೋಹಿತ್(8 ಅರ್ಧಶತಕ) ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡರು.
ಸದ್ಯ 247 ಏಕದಿನ ಪಂದ್ಯಗಳನ್ನು ಆಡಿದ್ದು 9978* ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್ ಪಾಲಿಗಿದೆ. 264 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ರೋಹಿತ್ ಇನ್ನೂ 22 ರನ್ ಬಾರಿಸುತ್ತಿದ್ದರೆ ಸಚಿನ್ ಅವರ ಮತ್ತೊಂದು ದಾಖಲೆಯನ್ನು ಮುರಿಯಬಹುದಾಗಿತ್ತು. ಅತಿ ಕಡಿಮೆ ಪಂದ್ಯಗಳಲ್ಲಿ 10 ಸಾವಿರ ರನ್ ಪೂರೈಸಿದ ಎರಡನೇ ಆಟಗಾರ ಎನಿಸಿಕೊಳ್ಳುತ್ತಿದ್ದರು. ವಿರಾಟ್ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 213 ಪಂದ್ಯಗಳಲ್ಲಿ ಮಾಡಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.