ಢಾಕಾ : ಮೂರು ಪಂದ್ಯಗಳ ಏಕ ದಿನ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಭಾನುವಾರ ಮಧ್ಯಾಹ್ನ ಮೊದಲ ಪಂದ್ಯ ಆರಂಭವಾಗಲಿದೆ. ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸರಣಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಶನಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಅವರು ಭಾರತ ತಂಡಕ್ಕೆ ಬೆಂಬಲ ನೀಡದ ಅಭಿಮಾನಿಗಳು ಇರುವುದು ಇದೊಂದೇ ದೇಶದಲ್ಲಿ ಹೇಳುವ ಮೂಲಕ, ನೆರೆದಿದ್ದ ಸುದ್ದಿಗಾರರಿಗೆ ಅಚ್ಚರಿ ಮೂಡಿಸಿದರು.
ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಗಳು ಅಭಿಮಾನದ ವಿಚಾರದಲ್ಲ ಕಟ್ಟರ್. ಅವರು ಬಾಂಗ್ಲಾದೇಶವನ್ನು ಬಿಟ್ಟು ಬೇರೆ ಯಾವ ದೇಶದ ಕ್ರಿಕೆಟಿಗರ ಸಾಧನೆಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಕೆಲವೊಂದು ಸಲ ಗ್ಯಾಲರಿಯಲ್ಲಿ ಅತಿರೇಕದ ವರ್ತನೆಯನ್ನೂ ತೋರುತ್ತಾರೆ. ನಾಗಿಣಿ ಡಾನ್ಸ್ ಮಾಡುವ ಮೂಲಕ ಎದುರಾಳಿ ತಂಡದ ಅಭಿಮಾನಿಗಳಿಗೆ ಕೋಪ ತರಿಸುವ, ಹತಾಶೆ ಮೂಡಿಸುವ ಕೆಲಸವನ್ನೂ ಮಾಡುತ್ತಾರೆ. ಈ ವಿಚಾರ ರೋಹಿತ್ ಶರ್ಮ ಅವರಿಗೆ ಗೊತ್ತಿದೆ. ಹೀಗಾಗಿ ತಮಗೆ ಬೆಂಬಲ ನೀಡದ ಅಭಿಮಾನಿಗಳು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ಪ್ರಶ್ನೆಯೊಂದನ್ನು ಆರಂಭಿಸಿದ್ದರು. “ಟೀಮ್ ಇಂಡಿಯಾಗೆ ಜಗತ್ತಿನ ಎಲ್ಲೆಡೆಯೂ ಅಭಿಮಾನಿಗಳಿದ್ದಾರೆ,” ಎಂಬುದಾಗಿ ಹೇಳುವಷ್ಟರಲ್ಲಿ ಮಧ್ಯ ಪ್ರವೇಶಿಸಿದ ರೋಹಿತ್ ಶರ್ಮ, “ಇಲ್ಲಿ ಇಲ್ಲ” ಎಂಬುದಾಗಿ ಹೇಳುತ್ತಾರೆ. ತಕ್ಷಣ ನರೆದಿದ್ದವರು ಜೋರಾಗಿ ನಗುತ್ತಾರೆ.
ಮುಂದುವರಿದ ಪತ್ರಕರ್ತರು, ನಿಮ್ಮಲ್ಲಿ ಕೆಲವರು ಹೊಸ ಆಟಗಾರರು ಇದ್ದಾರೆ. ಇಲ್ಲಿನ ಅಭಿಮಾನಿಗಳ ಮುಂದೆ ಅವರು ಯಾವ ರೀತಿ ಆಡಬಹುದು,” ಎಂಬುದಾಗಿ ಪ್ರಶ್ನಿಸುತ್ತಾರೆ.
ಅದಕ್ಕೆ ಉತ್ತರಿಸಿದ ರೋಹಿತ್ ಶರ್ಮ “ಇಲ್ಲಿ ಕ್ರಿಕೆಟ್ ಅಭಿಮಾನಿಗಳು ಭಯ ಹುಟ್ಟಿಸುತ್ತಾರೆ. ಅವರು ಕ್ರಿಕೆಟ್‌ನ ಉತ್ಕಟ ಅಭಿಮಾನಿಗಳು ಮತ್ತು ಅವರು ತಂಡವನ್ನಷ್ಟೇ ಬೆಂಬಲಿಸುತ್ತಾರೆ ಇದು ಬಾಂಗ್ಲಾ ತಂಡಕ್ಕೆ ರೋಮಾಂಚನಕಾರಿ. ನಮ್ಮ ಕೆಲವು ಆಟಗಾರರು ಮೊದಲ ಬಾರಿಗೆ ಬಾಂಗ್ಲಾ ನೆಲದಲ್ಲಿ ಆಡುತ್ತಿದ್ದಾರೆ. ಅದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲೂ ದೊಡ್ಡ ಮಟ್ಟದ ಕ್ರಿಕೆಟ್ ಅಭಿಮಾನಿಗಳ ಮುಂದೆ ಆಡುತ್ತೇವೆ. ಅವರ ಮುಂದೆ ಆಡುವಾಗ ಯಾವ ರೀತಿ ಇರುತ್ತೇವೆಯೋ, ಅದೇ ಪರಿಸ್ಥಿತಿ ಇಲ್ಲೂ ಇರುತ್ತದೆ. ಒತ್ತಡ ಇಲ್ಲ,” ಎಂಬುದಾಗಿ ಹೇಳುತ್ತಾರೆ.
ಇದನ್ನೂ ಓದಿ | Team India | ಮಾಹಿತಿ ನೀಡದೇ ವಿಮಾನ ಬದಲಾವಣೆ, ಇನ್ನೂ ಬಂದಿಲ್ಲ ಲಗೇಜ್; ಟೀಮ್ ಇಂಡಿಯಾ ಬೌಲರ್ ಬವಣೆ