ಮುಂಬಯಿ : ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಕಳೆದ ವರ್ಷ ಟಿ೨೦ ವಿಶ್ವ ಕಪ್‌ನ ಪಂದ್ಯದಲ್ಲಿ ನಾವು ಪಾಕಿಸ್ತಾನ ವಿರುದ್ಧ ಸೋತಿದ್ದೇವೆ. ಆದರೆ, ಈ ಬಾರಿ ನಮ್ಮ ತಂಡ ಭಿನ್ನ ಸಾಮರ್ಥ್ಯ ಹೊಂದಿದ್ದು, ಮುಂಬರುವ ಏಷ್ಯಾ ಕಪ್‌ನಲ್ಲಿ ಪಾಕ್ ತಂಡವನ್ನು ಬಗ್ಗು ಬಡಿಯುವುದು ಖಾತರಿ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
ಆಗಸ್ಟ್ ೨೭ರಿಂದ ಏಷ್ಯಾ ಕಪ್ ನಡೆಯಲಿದ್ದು ೨೮ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಇದು ಟೂರ್ನಿಯ ಹೈವೋಲ್ಟೇಜ್ ಹಣಾಹಣಿಯಾಗಿದೆ. ಆದರೆ, ಕಳೆದ ವರ್ಷ ಇದೇ ಸ್ಟೇಡಿಯಮ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಬಾಬರ್ ಅಜಮ್ ಪಡೆಯ ವಿರುದ್ಧ ಹೀನಾಯವಾಗಿ ೧೦ ವಿಕೆಟ್‌ಗಳಿಂದ ಸೋಲು ಕಂಡಿತ್ತು.
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ ಪಾಕಿಸ್ತಾನ ತಂಡಕ್ಕೆ ತಟಸ್ಥ ಕ್ರಿಕೆಟ್ ತಾಣ. ಅಲ್ಲಿನ ಪಿಚ್ ತಿರುವಿನ ಬಗ್ಗೆ ಆ ತಂಡಕ್ಕೆ ಹೆಚ್ಚಿನ ಮಾಹಿತಿ ಇದೆ. ಹೀಗಾಗಿ ಆ ಸ್ಟೇಡಿಯಮ್ ಅವರಿಗೆ ಪೂರಕವಾಗಿರುತ್ತದೆ. ಹೀಗಾಗಿ ಕಳೆದ ವರ್ಷದ ಪಂದ್ಯದಲ್ಲಿ ಭಾರತಕ್ಕೆ ಸೋಲಾಗಿತ್ತು. ಆದರೆ, ರೋಹಿತ್ ಶರ್ಮ ಈ ಬಾರಿ ಗೆಲುವು ನಮ್ಮದೇ ಎಂದಿದ್ದಾರೆ.
“ಹಿಂದಿನ ಬಾರಿ ಫಲಿತಾಂಶ ನಮಗೆ ಪೂರಕವಾಗಿ ಇರಲಿಲ್ಲ. ಆದರೆ, ಈ ಬಾರಿ ನಮ್ಮ ತಂಡದ ಸಂಯೋಜನೆ ಉತ್ತಮವಾಗಿದೆ. ಎಂಥ ಪರಿಸ್ಥಿತಿಯಲ್ಲೂ ಆಡುವ ಶಕ್ತಿ ಬೆಳೆಸಿಕೊಂಡಿದೆ. ಅಂತೆಯೆ ಮರುಭೂಮಿ ನಾಡಿನ ತಾಪಮಾನಕ್ಕೆ ಪೂರಕವಾಗಿ ಅಡುವುದಕ್ಕೆ ಸಿದ್ಧವಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | IND vs ZIM ODI | ಧವನ್- ಗಿಲ್ ಜೋಡಿಯ ಕಮಾಲ್, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ