Site icon Vistara News

IND VS NZ: 30ನೇ ಏಕದಿನ ಶತಕ ಬಾರಿಸಿದ ರೋಹಿತ್​ ಶರ್ಮಾ

rohit sharma

ಇಂದೋರ್​: ನ್ಯೂಜಿಲ್ಯಾಂಡ್​(IND VS NZ) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ(Rohit sharma) ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಬರೋಬ್ಬರಿ 1,100 ದಿನಗಳ ಬಳಿಕ ಏಕದಿನದಲ್ಲಿ ಶತಕ ಪೂರೈಸಿದರು.

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಕಿವೀಸ್​ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್​ ಶತಕ ಬಾರಿಸುವ ತಮ್ಮ ವೃತ್ತಿ ಜೀವನದ 30ನೇ ಏಕದಿನ ಶತಕ ಪೂರೈಸಿದರು. ಕಳೆದ ಕೆಲ ವರ್ಷಗಳಿಂದ ಶತಕದ ಬರ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ರೋಹಿತ್​ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ತಮ್ಮ ಹಳೇಯ ಫಾರ್ಮ್ ಕಂಡುಕೊಂಡರು.

ಈ ಪಂದ್ಯದಲ್ಲಿ 85 ಎಸೆತ ಎದುರಿಸಿದ ರೋಹಿತ್ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 101 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಗಿಲ್​ ಜತೆಗೆ ಮೊದಲ ವಿಕೆಟ್​ಗೆ 212 ರನ್​ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಕಾಕತಾಳೀಯವೆಂಬಂತೆ ರೋಹಿತ್ ಇದೇ ಮೈದಾನದಲ್ಲಿ ಟಿ20ಯಲ್ಲಿ ಶತಕ ಸಿಡಿಸಿದ್ದರು. ಒಂದೂವರೆ ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಬಾರಿಸಿದ ಮೊದಲ ಶತಕ ಇದಾಗಿದೆ. ಈ ಮೊದಲು ಸೆಪ್ಟೆಂಬರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ್ದ ರೋಹಿತ್ ಅಂದಿನಿಂದ ಆಡಿರುವ 54 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕ ಸಿಡಿಸಿರಲಿಲ್ಲ. ಇದೀಗ ಕಿವೀಸ್​ ವಿರುದ್ಧ ಶತಕಕ ಬಾರಿಸಿ ಮಿಂಚಿದ್ದಾರೆ.

ಇದನ್ನೂ ಓದಿ | IND VS NZ: ನ್ಯೂಜಿಲ್ಯಾಂಡ್​ ವಿರುದ್ಧ ನೂತನ ದಾಖಲೆ ಬರೆದ ಶುಭಮನ್​ ಗಿಲ್​-ರೋಹಿತ್​ ಶರ್ಮಾ

Exit mobile version