ಮುಂಬಯಿ: ಐಪಿಎಲ್(IPL 2024) ಪ್ರಸಾರಕರಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಟ್ವೀಟ್ ಮೂಲಕ ಸ್ಟಾರ್‌ಸ್ಪೋರ್ಟ್ಸ್(Star Sports) ವಿರುದ್ಧ ಗಂಭೀರ ಆರೋಪ ಮಾಡಿದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರ ಈ ಆರೋಪಕ್ಕೆ ಇದೀಗ ಸ್ಟಾರ್‌ಸ್ಪೋರ್ಟ್ಸ್ ಸ್ಪಷ್ಟನೆ ನೀಡಿದ್ದು, ರೋಹಿತ್ ಮಾತನಾಡಿರುವ ಯಾವುದೇ ಖಾಸಗಿ ಆಡಿಯೋಗಳನ್ನು ಪ್ರಸಾರ ಮಾಡಿಲ್ಲ ಎಂದು ಹೇಳಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಜತೆ ರೋಹಿತ್ ಮಾತನಾಡುತ್ತ ಕುಳಿತ್ತಿದ್ದ ವೀಡಿಯೋವನ್ನು ಪ್ರಸಾರ ಮಾಡಲಾಗಿತ್ತು. ಇದಾದ ಬಳಿಕ ರೋಹಿತ್ ಮುಂಬೈಯಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಧವಳ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಇದನ್ನು ರೆಕಾರ್ಡ್ ಮಾಡುತ್ತಿರುವಾಗ ಕ್ಯಾಮೆರಾಮನ್ಗೆ ಆಡಿಯೊ ಆಫ್ ಮಾಡಿ ಎಂದು ಕೋರಿಕೊಂಡಿದ್ದರು.
ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡಿದ ಆರ್ಸಿಬಿ ಆಟಗಾರರು
ಇದೇ ವಿಚಾರವಾಗಿ ರೋಹಿತ್ ಟ್ವೀಟ್ ಮಾಡಿ ‘ತನ್ನ ವಿನಂತಿಯ ಹೊರತಾಗಿಯೂ, ಸ್ಟಾರ್ ಸ್ಪೋರ್ಟ್ಸ್ ನಾನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಪೋರ್ಟ್ಸ್ ಮುಂದುವರೆಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಹುಟ್ಟಿಸುವ ಸಲುವಾಗಿ ಪ್ರಸಾರಕರು ಈ ರೀತಿ ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸ್ವಲ್ಪವಾದರೂ ಸಾಮಾನ್ಯ ಜ್ಞಾನ ಇರಬೇಕು” ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.
ಕ್ರಿಕೆಟಿಗರ ಜೀವನವು ಎಷ್ಟು ಗೊಂದಲವಾಗಿದೆ ಎಂದರೆ, ಈಗ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ಮಾತನಾಡು ಕೂಡ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ನಡೆಸುವ ಪ್ರತಿಯೊಂದು ಸಂಭಾಷಣೆಯನ್ನು ಕೂಡ ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ. ಇದು ಒಳ್ಳೆಯ ವಾತಾವರಣವಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿದ ಸ್ಟಾರ್‌ಸ್ಪೋರ್ಟ್ಸ್, ‘ಇದರಲ್ಲಿ ಯಾವುದೇ ಧ್ವನಿ ಇರಲಿಲ್ಲ. ಅಲ್ಲದೇ ನಮಗೆ ಅನುಮತಿ ನೀಡಿದ ಜಾಗದಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣದ ವೇಳೆಯಲ್ಲೂ ಧ್ವನಿ ಮುದ್ರಿಸಲಾಗಿರಲಿಲ್ಲ’ ಎಂದು ಹೇಳಿದೆ.
ನಾಯಕತ್ವದ ಕರ್ತವ್ಯಗಳಿಂದ ಮುಕ್ತರಾದ ನಂತರ ರೋಹಿತ್ ಈ ಬಾರಿ ದೊಡ್ಡ ಸ್ಕೋರ್ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಗಳಲ್ಲೆ ಹುಸಿಯಾಗಿತ್ತು. ರೋಹಿತ್ ಈ ಬಾರಿ 1 ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬಹುತೇಕ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದರು. ಐಪಿಎಲ್ ವೇದಿಕೆಯಲ್ಲಿ ಮಿಂಚಲು ಸಾಧ್ಯವಾಗದಿದ್ದರೂ, ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ದೊಡ್ಡ ಮೊತ್ತವನ್ನು ಗಳಿಸಲು ಎದುರು ನೋಡುತ್ತಿದ್ದಾರೆ.
ಟೀಮ್ ಇಂಡಿಯಾದ(team india) ಮೊದಲ ಬ್ಯಾಚ್ ಮೇ 25ರಂದು ನ್ಯೂಯಾರ್ಕ್(New York)ಗೆ ಪ್ರಯಾಣಿಸಲಿದೆ. ಈ ಬ್ಯಾಚ್ನಲ್ಲಿ ನಾಯಕ ರೋಹಿತ್ ಶರ್ಮ(Rohit Sharma), ಉಪನಾಯಕ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಸೇರಿ ಐಪಿಎಲ್ ಪ್ಲೇ ಆಫ್ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್ ಫೈನಲ್ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.