ಬೆಂಗಳೂರು : ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ (INDvsBAN) ಪಂದ್ಯಕ್ಕೆ ಕಾಯಂ ನಾಯಕ ರೋಹಿತ್ ಶರ್ಮ ಅಲಭ್ಯರಾಗಿದ್ದಾರೆ. ಉಪನಾಯಕ ಕೆ. ಎಲ್ ರಾಹುಲ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮ ಅವರು ಏಕ ದಿನ ಸರಣಿಯ ಎರಡನೇ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ವಾಪಸ್ ಮುಂಬಯಿಗೆ ಬಂದಿದ್ದರು. ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಬಾಂಗ್ಲಾದೇಶಕ್ಕೆ ಹೋಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 188 ರನ್ಗಳ ಬೃಹತ್ ಜಯ ದಾಖಲಿಸಿತ್ತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮುಂದಿನ ಟೆಸ್ಟ್ ಪಂದ್ಯ ಮೀರ್ಪುರದಲ್ಲಿ ನಡೆಯಲಿದ್ದು ಇದನ್ನೂ ಗೆದ್ದು ಸರಣಿಯನ್ನು ವಶ ಪಡಿಸಿಕೊಳ್ಳುವುದು ಭಾರತ ತಂಡದ ಇರಾದೆಯಾಗಿದೆ. ಈ ಸರಣಿಯನ್ನು ಭಾರತದ ಉತ್ತಮ ಅಂಕಗಳೊಂದಿಗೆ ತಮ್ಮದಾಗಿಸಿಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಅವಕಾಶ ಪಡೆಯುವುದು ಸುಲಭ.
ಮೊದಲ ಪಂದ್ಯದಲ್ಲಿ ಭಾರತ ತಂಡ ಉತ್ತಮವಾಗಿ ಆಡಿತ್ತು. ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಹಾಗೂ ಶುಬ್ಮನ್ ಗಿಲ್ ವಿಶ್ವಾಸ ಮೂಡಿಸಿದ್ದರು. ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಭಾರತದ ಗೆಲುವಿಗೆ ನೆರವು ಕೊಟ್ಟಿದ್ದರು. ಮೀರ್ಪುರದಲ್ಲಿ ನಡೆಯುವ ಮುಂದಿನ ಪಂದ್ಯದಲ್ಲೂ ಅವರು ಅದೇ ಮಾದರಿಯ ಪ್ರದರ್ಶನ ನೀಡಿದರೆ ಸರಣಿ ಗೆಲುವು ಸುಲಭ.
ಇದನ್ನೂ ಓದಿ | INDvsBAN | ರೋಹಿತ್ ಶರ್ಮಗೆ ಮನೆಯಲ್ಲೇ ಕುಳಿತುಕೊಳ್ಳಲು ಹೇಳಿ; ಹೀಗೆಂದಿದ್ದು ಯಾರು?