Site icon Vistara News

ಒತ್ತಡಕ್ಕೆ ಮಣಿದು ರೋಹಿತ್‌ ನಾಯಕತ್ವ ವಹಿಸಿಕೊಂಡರು; ಗಂಗೂಲಿ ಅಚ್ಚರಿಯ ಹೇಳಿಕೆ

ganguly and rohit

ಕೋಲ್ಕೊತಾ:​ ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ(Rohit Sharma) ಅವರಿಗೆ ತಂಡದ ನಾಯಕನಾಗಲು ಆಸಕ್ತಿ ಇರಲಿಲ್ಲ ಎಂಬ ವಿಚಾರವನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ(Sourav Ganguly) ರಿವೀಲ್‌ ಮಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ತಂಡ ನಾಯಕತ್ವ ವಹಿಸಿಕೊಳ್ಳುವಂತೆ ರೋಹಿತ್‌ಗೆ ಒತ್ತಡ ಹೇರುವ ಮೂಲಕ ಒಪ್ಪಿಸಲಾಯಿತು ಎಂಬ ಸಂಗತಿಯನ್ನು ಗಂಗೂಲಿ ಬಹಿರಂಗ ಪಡಿಸಿದ್ದಾರೆ.

ಸ್ಥಳೀಯ ಸುದ್ದಿವಾಹಿನಿಯೊಂದರ ಕ್ರೀಡಾ ಚರ್ಚೆಯ ಕಾರ್ಯಕ್ರಮದಲ್ಲಿ ಗಂಗೂಲಿ ಅವರು ಈ ವಿಚಾರವನ್ನು ಬಹಿರಂಗ ಪಡಿಸಿದರು. “ರೋಹಿತ್​ ಶರ್ಮಾ ನಾಯಕತ್ವದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ತಾವು ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು ಈ ವೇಳೆ ತಂಡದ ನಾಯಕನಾಗಿ ರೋಹಿತ್‌ ಅವರ ಹೆಸರು ಕೇಳ ಬಂತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಬಳಿಕ ಅವರನ್ನು ಒತ್ತಾಯದ ಮೇರೆಗೆ ಒಪ್ಪಿಸಲಾಯಿತುʼ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ Babar Azam: ಭಾರತದಿಂದ ಅಪಾರವಾದ ಪ್ರೀತಿ ಸಿಕ್ಕಿದೆ ಎಂದ ಪಾಕ್‌ ನಾಯಕ ಬಾಬರ್‌ ಅಜಂ

ʼರೋಹಿತ್ ಶರ್ಮಾಗೆ ಟೀಮ್ ಇಂಡಿಯಾದ ನಾಯಕನಾಗುವುದು ಚೂರು ಇಷ್ಟವಿರಲಿಲ್ಲ. ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದ ಕಾರಣ ಹೆಚ್ಚಿನ ಒತ್ತಡ ನಿಭಾಯಿಸುವುದು ಕಷ್ಟವಾಗಲಿದೆ ಎನ್ನುವ ಕಾರಣದಿಂದ ಅವರು ನಾಯಕತ್ವ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ, ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ತಂಡವನ್ನು ಅದ್ಬುತವಾಗಿ ಮುನ್ನಡೆಸಿ ಪ್ರಶಸ್ತಿಗಳನ್ನು ಜಯಿಸಿದ್ದರು. ಇದೇ ವಿಚಾರವನ್ನು ಹೇಳುವ ಮೂಲಕ ಅವರ ಮನವೊಲಿಸಿ ಅವರನ್ನು ಒಪ್ಪಿಸಲಾಯಿತುʼ ಎಂದು ಗಂಗೂಲಿ ಅಂದಿನ ಘಟನೆಯನ್ನು ವಿವರಿಸಿದರು.

ಒತ್ತಡಕ್ಕೆ ಮಣಿದ ರೋಹಿತ್‌

ಎಷ್ಟೇ ಹೇಳಿದರೂ ಕೇಳದ ವೇಳೆ ನಾನು ರೋಹಿತ್‌ ಅವರಲ್ಲಿ, ನೀವು ನಾಯಕ ಎಂದು ಒಪ್ಪಿಕೊಳ್ಳುತ್ತಿರೋ ಅಥವಾ, ನಾನೇ ಘೋಷಣೆ ಮಾಡಬೇಕೋ? ಎಂದು ಒತ್ತಡ ಹಾಕಿದ್ದೆ. ಬಳಿಕ ರೋಹಿತ್‌ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದರು ಎಂದು ಗಂಗೂಲಿ ಹೇಳಿದ್ದಾರೆ.

ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ ಟೂನಿಯಲ್ಲಿ ರೋಹಿತ್‌ ಸಾರಥ್ಯದಲ್ಲಿ ಭಾರತ ತಂಡ ಉತ್ತಮ ಪ್ರದಶನ ತೋರುತ್ತಿದ್ದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿದೆ. ಅಂತಿಮ ಲೀಗ್‌ ಪಂದ್ಯವನ್ನು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ಎದುರಾಗುವ ಸಾಧ್ಯತೆ ಇದೆ. ಸದ್ಯ ಭಾರತದ ಆಟ ನೋಡುವಾಗ ಈ ಬಾರಿ ಕಪ್‌ ಗೆಲ್ಲುವ ಎಲ್ಲ ಲಕ್ಷಣ ಕಂಡುಬಂದಿದೆ.

ಗಂಗೂಲಿಯೇ ಮೂಲ ಕಾರಣ

ಕೊಹ್ಲಿ ಏಕದಿನ ತಂಡದ ನಾಯಕತ್ವದ ಪದಚ್ಯುತಿಗೆ ಗಂಗೂಲಿಯೇ ಮೂಲ ಕಾರಣ ಎನ್ನಲಾಗಿತ್ತು. ಇದೇ ವಿಚಾರವಾಗಿ ಕೊಹ್ಲಿ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ವಿಚಾರವನ್ನು ಬಿಸಿಸಿಐ ಅಧ್ಯಕ್ಷರು ನನಗೆ ಹೇಳಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಈ ಆರೋಪವನ್ನು ಗಂಗೂಲಿ ತಳ್ಳಿಹಾಕಿದ್ದರು. 

ಚೇತನ್​ ಶರ್ಮ ಸ್ಪಷ್ಟನೆ

ಕೆಲವು ತಿಂಗಳುಗಳ ಹಿಂದೆ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್​ ಶರ್ಮ ಹಲವು ಸ್ಫೋಟಕ ಮಾಹಿತಿ ಹೊರಹಾಕಿದ್ದರು. ಇದರಲ್ಲಿ ಗಂಗೂಲಿ ಮತ್ತು ವಿರಾಟ್​ ಕೊಹ್ಲಿಯ ವಿಚಾರವನ್ನು ಬಹಿರಂಗಪಡಿಸಿದ್ದರು.

2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ಗೆ ಮುನ್ನವೇ ಕೊಹ್ಲಿ ಟೂರ್ನಿಯ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ‘ನಾಯಕತ್ವ ತೊರೆಯಬೇಡಿ, ಇನ್ನೊಮ್ಮೆ ಯೋಚಿಸಿ’ ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಕೊಹ್ಲಿಗೆ ಸೂಚಿಸಿದ್ದರು ಎಂದು ಚೇತನ್​ ಶರ್ಮ ಹೇಳಿದ್ದರು. ಟೀಮ್​ ಇಂಡಿಯಾದ ಏಕ ದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವ ನಿರ್ಧಾರವನ್ನು ಮುಖ್ಯ ಆಯ್ಕೆಗಾರನಾಗಿ ನಾನು ತೆಗೆದುಕೊಂಡಿದ್ದೆ. ಟೆಸ್ಟ್​ ಮತ್ತು ಏಕ ದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು ಎಂಬ ಉದ್ದೇಶವೇ ಇದಕ್ಕೆ ಕಾರಣ. ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಗಂಗೂಲಿ ಕಾರಣರಲ್ಲ, ಅವರು ಯಾವತ್ತೂ ಅದನ್ನು ಬಯಸಿರಲಿಲ್ಲ ಎಂದು ಚೇತನ್​ ಸ್ಪಷ್ಟಣೆ ನೀಡಿದ್ದರು.

Exit mobile version