ಕೋಲ್ಕೊತಾ: ಪ್ರತಿ ಪಂದ್ಯದಲ್ಲಿಯೂ ಉತ್ತಮ ಫೀಲ್ಡಿಂಗ್ ನಡೆಸಿದ ಆಟಗಾರರನ್ನು ಗುರುತಿಸಿ ನೀಡಲಾಗುವ ‘ಬೆಸ್ಟ್ ಫೀಲ್ಡರ್ ಅವಾರ್ಡ್’ ಈ ಬಾರಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರಿಗೆ ಲಭಿಸಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಜೋರಾಗಿ ಕೂಗಿ ರೋಹಿತ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಆಟಗಾರರಲ್ಲಿ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಬಿಸಿಸಿಐ ಈ ವಿನೂತನ ಚಿನ್ನದ ಪದಕ ನೀಡಿವ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಪಂದ್ಯದ ವೇಳೆ ಯಾರು ಉತ್ತಮವಾಗಿ ಫೀಲ್ಡಿಂಗ್ ನಡೆಸುತ್ತಾರೋ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಈಗಾಗಲೇ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಕೆ.ಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ಅವರಿಗೆ ಈ ಪ್ರಶಸ್ತಿ ಒಲಿದಿದೆ.
ಇದನ್ನೂ ಓದಿ Virat Kohli: ಲಂಕಾದ ದಿಗ್ಗಜ ಬ್ಯಾಟರ್ನ ವಿಶ್ವಕಪ್ ದಾಖಲೆ ಮುರಿದ ಕಿಂಗ್ ಕೊಹ್ಲಿ
The way Ishan Kishan and Shubman Gill jumped on Rohit Sharma shows how beautiful atmosphere they have. pic.twitter.com/1ZUi7SqHrD
— R A T N I S H (@LoyalSachinFan) November 6, 2023
ಪಂದ್ಯದ ಮುಕ್ತಾಯದ ಬಳಿಕ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರು ತಂಡದ ಫೀಲ್ಡಿಂಗ್ ಪ್ರದರ್ಶನದ ಬಗ್ಗೆ ವಿವರಿಸಿ ಯಾವೆಲ್ಲ ಆಟಗಾರರು ಉತ್ತಮ ನಿರ್ವಹಣೆ ತೋರಿದ್ದಾರೋ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಬಳಿಕ ಉತ್ತಮ ಫೀಲ್ಡರ್ ಪ್ರಶಸ್ತಿಗೆ ರೋಹಿತ್ ಪಾತ್ರರಾಗಿದ್ದಾರೆ ಎಂದು ಘೋಷಣೆ ಮಾಡಿದರು. ಈ ವೇಳೆ ಇಶಾನ್ ಕಿಶನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅವರು ಜೋರಾಗಿ ಕೂಗಿ ರೋಹಿತ್ ಅವರನ್ನು ಚಿಯರ್ ಅಪ್ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದ ಶ್ರೇಯಸ್ ಅಯ್ಯರ್ ಅವರು ರೋಹಿತ್ ಕೊರಳಿಗೆ ಚಿನ್ನದ ಪದಕ ಹಾಕಿ ಅಭಿನಂದಿಸಿದರು.
ರೋಹಿತ್ ಅವರು ಈ ಪಂದ್ಯದಲ್ಲಿ ಕ್ರೀಸ್ಗಿಳಿದ ಆರಂಭದಲ್ಲೇ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 24 ಎಸೆತದಲ್ಲಿ 40 ರನ್ ಚಚ್ಚಿದರು. ಅವರ ಈ ಬಿರುಸಿನ ಬ್ಯಾಟಿಂಗ್ ವೇಳೆ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು. ಈ ಬಾರಿಯ ವಿಶ್ವಕಪ್ನಲ್ಲಿ ರೋಹಿತ್ ಒಂದು ಶಕತ ಬಾರಿಸಿದ್ದಾರೆ. 2019ರ ವಿಶ್ವಕಪ್ನಲ್ಲಿ 5 ಶತಕ ಬಾರಿಸಿದ ಸಾಧನೆ ಮಾಡಿದ್ದರು.
ಭಾರತಕ್ಕೆ 243 ರನ್ ಗೆಲುವು
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವಿರಾಟ್ ಕೊಹ್ಲಿಯ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಜೋಶ್ ಮರೆತು 27.1 ಓವರ್ಗಳಲ್ಲಿ 83 ರನ್ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು. ಕಳೆದ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ್ದ ಶಮಿ ಈ ಪಂದ್ಯದಲ್ಲಿ 1 ವಿಕೆಟ್ಗೆ ಸೀಮಿತರಾದರು.