ಮುಂಬಯಿ : ಓವಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳಿಂದ ಭಾರತ ತಂಡ (Team India) ಸೋತ ನಂತರ ರೋಹಿತ್ ಶರ್ಮಾ (Rohit Sharma) ಅವರ ಟೆಸ್ಟ್ ನಾಯಕತ್ವದ ಅಪಾಯಕ್ಕೆ ಸಿಲುಕಿದೆ. ಅವರ ಸಾಮರ್ಥ್ಯದ ಬಗ್ಗೆ ಭರ್ಜರಿ ವಿಮರ್ಶೆಗಳು ನಡೆಯುತ್ತಿವೆ. ವಿಶೇಷವೆಂದರೆ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ಅವರ ನಿರ್ಧಾರವು ಸಂಪೂರ್ಣವಾಗಿ ಟೀಕೆಗೊಳಗಾಗಿದೆ. ಜತೆಗೆ ಅಶ್ವಿನ್ ಅವರನ್ನು ಬೆಂಚು ಕಾಯಿಸಿದ ನಿರ್ಧಾರಕ್ಕೆ ಆಕ್ಷೇಪಗಳು ಕೇಳಿ ಬಂದಿವೆ.
ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಪಂದ್ಯದುದ್ದಕ್ಕೂ ಭಾರತ ತಂಡದ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಹೀಗಾಗಿ ಭಾರತ ಟೆಸ್ಟ್ ತಂಡದ ಸಾಮರ್ಥ್ಯದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಅದರ ಜತೆಗೆ ರೋಹಿತ್ ಅವರ ಟೆಸ್ಟ್ ನಾಯಕತ್ವವೂ ಸೇರಿಕೊಂಡಿದೆ. ಆದಾಗ್ಯೂ 36 ವರ್ಷದ ಆಟಗಾರ ಜುಲೈ 12ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಭಾಗವಾಗಿದೆ ಈ ಸರಣಿ. ಜತೆಗೆ ಮುಂದಿನ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೊದಲ ಹಣಾಹಣಿಯಾಗಿದೆ.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಸದ್ಯ ರೋಹಿತ್ ಅವರ ಟೆಸ್ಟ್ ನಾಯಕತ್ವವು ಯಾವುದೇ ರೀತಿಯ ಅಪಾಯಕ್ಕೆ ಸಿಲುಕಿಲ್ಲ. ಆದರೆ ಆಯ್ಕೆ ಸಮಿತಿ ಮತ್ತು ಕೆಲವು ಹಿರಿಯ ಅಧಿಕಾರಿಗಳು ಈಗಾಗಲೇ ಅವರ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ. ಏಕೆಂದರೆ ಮುಂದಿನ ಡಬ್ಲ್ಯುಟಿಸಿ ಋತು ಕೊನೆಗೊಳ್ಳುವ ಹೊತ್ತಿಗೆ ಕ್ರಿಕೆಟಿಗನಿಗೆ 38 ವರ್ಷ ತುಂಬುತ್ತದೆ. ಹೀಗಾಗಿ, ರೋಹಿತ್ ಅವರನ್ನು ಕೆಳಕ್ಕೆ ಇಳಿಸುವ ಬಗ್ಗೆ ಯೋಚಿಸಿರುವ ಆಡಳಿತ ಮಂಡಳಿಯು ಸೂಕ್ತವಾದ ಆಟಗಾರನನ್ನು ಕಂಡುಕೊಳ್ಳುವ ಯೋಜನೆ ಹಾಕಿಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಬಳಿಕ ರೋಹಿತ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗುವುದು ಎಂಬುದು ಸದ್ಯ ಆಧಾರರಹಿತ ಚರ್ಚೆ. ಆದರೆ, ಮುಂದಿನ ಎರಡು ವರ್ಷಗಳ ಡಬ್ಲ್ಯುಟಿಸಿ ಋತುವಿನಲ್ಲಿ ತಂಡದಲ್ಲಿ ಉಳಿದುಕೊಳ್ಳುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ, ಏಕೆಂದರೆ ಮೂರನೇ ಆವೃತ್ತಿಯು 2025 ರಲ್ಲಿ ಕೊನೆಗೊಳ್ಳುವಾಗ ಅವರಿಗೆ ಸುಮಾರು 38 ವರ್ಷ ವಯಸ್ಸಾಗಲಿದೆ. ಶಿವ ಸುಂದರ್ ದಾಸ್ ಅವರನ್ನೊಳಗೊಂಡ ಆಯ್ಕೆ ಸಮಿತಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ನಂತರ ಮತ್ತು ಅವರ ಬ್ಯಾಟಿಂಗ್ ಫಾರ್ಮ್ ಅನ್ನು ನೋಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ” ಎಂದು ಬಿಸಿಸಿಐ ಮೂಲವೊಂದು ದಿ ಹಿಂದೂಗೆ ತಿಳಿಸಿದ್ದಾರೆ.
ಇದನ್ನೂ ಓದಿ : WTC Final 2023 : ರೋಹಿತ್ ಬಳಗದ ಹೀನಾಯ ಸೋಲಿಗೆ ಇಲ್ಲಿವೆ 5 ಪ್ರಮುಖ ಕಾರಣಗಳು
ವೆಸ್ಟ್ ಇಂಡೀಸ್ ಪ್ರವಾಸದ ನಂತರ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ. ಡಿಸೆಂಬರ್ ಅಂತ್ಯದವರೆಗೆ ನಮಗೆ ಯಾವುದೇ ಟೆಸ್ಟ್ ಪಂದ್ಯಗಳಿಲ್ಲ. ಆದ್ದರಿಂದ ಆಯ್ಕೆದಾರರಿಗೆ ಯೋಚಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯವಿದೆ. ಅಷ್ಟೊತ್ತಿಗಾಗಲೇ ಐದನೇ ಆಯ್ಕೆದಾರ (ಹೊಸ ಅಧ್ಯಕ್ಷ) ಕೂಡ ಸಮಿತಿಗೆ ಸೇರುತ್ತಾರೆ ಮತ್ತು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
2022 ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ನಂತರ ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನು ತ್ಯಜಿಸಿದ ನಂತರ ರೋಹಿತ್ ಅವರನ್ನು ಟೆಸ್ಟ್ ನಾಯಕನಾಗಿ ನೇಮಿಸಲಾಯಿತು. ಅಂದಿನಿಂದ, ರೋಹಿತ್ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಸರಣಿಗಳನ್ನು ಗೆಲ್ಲುವ ಮೂಲಕ ಆಟದ ಸುದೀರ್ಘ ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾಯಕನಾಗಿ ಏಳು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ 35.45 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ.