ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧದ INDvsENG ODI ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ೫೮ ಎಸೆತಗಳಲ್ಲಿ ೭೬ ರನ್ ಬಾರಿಸಿದ ಅವರು ಭಾರತದ ೧೦ ವಿಕೆಟ್‌ಗಳ ಗೆಲುವಿನ ಹಿಂದೆ ದೊಡ್ಡ ಪಾತ್ರ ವಹಿಸಿದ್ದಾರೆ. ಆದರೆ, ಅವರು ಬಾರಿಸಿದ ಸಿಕ್ಸರ್ ಒಂದು ಬಾಲಕಿಯ ತಲೆಗೆ ಬಿದ್ದಿದ್ದು, ಪಂದ್ಯದ ಬಳಿಕ ಅವರು ಬಾಲಕಿಯನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಫುಲ್‌ಶಾಟ್ ಹಾಗೂ ಹುಕ್ ಶಾಟ್‌ಗಳ ಮೂಲಕ ಮಿಂಚಿದ್ದರು. ಈ ಎರಡೂ ಹೊಡೆತಗಳು ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿ. ಶಾಟ್ ಸರಿಯಾಗಿ ಕ್ಲೀಯರ್ ಆಗದಿದ್ದರೆ. ಫೈನ್ ಲೆಗ್‌ನಲ್ಲಿರುವ ಫೀಲ್ಡರ್ ಕ್ಯಾಚ್ ಹಿಡಿಯವುದು ಖಾತರಿ. ಆದಾಗ್ಯೂ ರೋಹಿತ್ ಶರ್ಮ ಈ ಎರಡೂ ಮಾದರಿಯ ಹೊಡೆತಗಳಲ್ಲಿ ಕರಾರುವಾಕ್.
ವಿಲ್ಲೀ ಎಸೆತಕ್ಕೆ ಸಿಕ್ಸರ್
ಇಂಗ್ಲೆಂಡ್‌ನ ಎಡಗೈ ವೇಗಿ ಡೇವಿಡ್ ವಿಲ್ಲೀ ಅವರ ಎಸೆತಕ್ಕೆ ರೋಹಿತ್ ಶರ್ಮ ಭರ್ಜರಿ ಫುಲ್‌ಶಾಟ್ ಹೊಡೆದಿದ್ದಾರೆ. ಚೆಂಡು ಸೀದಾ ೭೯ ಮೀಟರ್ ದೂರ ಸಾಗಿ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದೆ. ಅಲ್ಲಿ ತದೇಕಚಿತ್ತದಿಂದ ಪಂದ್ಯ ನೋಡುತ್ತಿದ್ದ ಬಾಲಕಿಯೊಬ್ಬಳ ತಲೆಗೆ ಚೆಂಡು ಬಿದ್ದಿದೆ. ನೋವಿಗೆ ಆಕೆ ಅಳಲು ಆರಂಭಿಸಿದ್ದಾಳೆ. ಬಾಲಕಿಯ ತಲೆಗೆ ಚೆಂಡು ಬಡಿದದ್ದು ಗೊತ್ತಾಗಿ ರೋಹಿತ್ ಶರ್ಮ ಸ್ವಲ್ಪ ಹೊತ್ತು ಬೇಸರದ ಭಾವ ವ್ಯಕ್ತಪಡಿಸಿದರು. ಚೆಂಡು ಅಲ್ಲಿಂದ ವಾಪಸ್ ಬರುವುದೂ ಸ್ವಲ್ಪ ತಡವಾಯಿತು.
“ರೋಹಿತ್ ಸಿಕ್ಸರ್ ಬಾರಿಸಿದ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿ ಬಾಲಕಿಯೊಬ್ಬಳ ತಲೆಗೆ ಬಿದ್ದಂತಿದೆ. ಆ ಬಾಲಕಿಗೆ ಪೆಟ್ಟಾಗಿರಬಹುದೇನೋ. ಆದರೆ, ಹೆಚ್ಚಿನ ಗಾಯವಾಗದಿರಲಿ ಎಂದು ಆಶೀಸೋಣ,ʼʼ ಎಂದು ಟಿವಿ ನೇರ ಪ್ರಸಾರದ ಕಾಮೆಂಟೇಟರ್‌ಗಳು ಹೇಳಿದ್ದರು.
ಪಂದ್ಯ ಮುಕ್ತಾಯಗೊಂಡ ಬಳಿಕ ರೋಹಿತ್ ಶರ್ಮ ಪ್ರೇಕ್ಷಕರ ಗ್ಯಾಲರಿಗೆ ತೆರಳಿ ಗಾಯಗೊಂಡಿದ್ದ ಬಾಲಕಿಯನ್ನು ಭೇಟಿ ಮಾಡಿ ಸಮಾಧಾನ ಕೂಡ ಹೇಳಿದ್ದಾರೆ.
ಇದನ್ನೂ ಓದಿ ; Ind vs Eng T20 : ಕೊಹ್ಲಿಯ ಸಾಧನೆಯನ್ನು ಮೀರಿದ ರೋಹಿತ್ ಶರ್ಮ