ಮುಂಬಯಿ : ಟೀಮ್ ಇಂಡಿಯಾದ ಐಸಿಸಿ ಟ್ರೋಫಿಯ ಬರ ಮುಂದುವರಿದಿದೆ. ಕಳೆದ ಟಿ೨೦ ವಿಶ್ವ ಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಮತ್ತೊಮ್ಮೆ ನಿರಾಸೆ ಎದುರಿಸಿದೆ. ಇದೇ ವೇಳೆ ಟೀಮ್ ಇಂಡಿಯಾದ ಆಟಗಾರರು ಕ್ರಿಕೆಟ್ ಪ್ರೇಮಿಗಳಿಂದ ಟೀಕೆಗಳಿಗೆ ಒಳಗಾದರು. ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇ ಏರದೇ ಇರಲು ಐಪಿಎಲ್ ಕಾರಣ ಎಂಬುದಾಗಿ ವಿಶ್ಲೇಷಣೆಗಳನ್ನೂ ಮಾಡಲಾಯಿತು. ಅಂತೆಯೇ ಇದೀಗ ರೋಹಿತ್ ಶರ್ಮಾ (Rohit Sharma) ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅವರು ಐಪಿಎಲ್ ಆಡುವುದು ಬಿಟ್ಟರಷ್ಟೇ ಮುಂದಿನ ವರ್ಷದಲ್ಲಾದರೂ ಚಾಂಪಿಯನ್‌ಪಟ್ಟ ಗಳಿಸಬಹುದು ಎಂದು ಹೇಳಿದ್ದಾರೆ.
ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ಏಕ ದಿನ ಕ್ರಿಕೆಟ್ ವಿಶ್ವ ಕಪ್ ನಡೆಯಲಿದೆ. ಹೇಗಾದರೂ ಅಲ್ಲಿ ಚಾಂಪಿಯನ್‌ಪಟ್ಟ ಗಳಿಸುವುದು ಟೀಮ್ ಇಂಡಿಯಾದ ಗುರಿಯಾಗಿದೆ. ಹೀಗಾಗಿ ತಂಡದ ಸಂಯೋಜನೆ ಸೇರಿದಂತೆ ನಾನಾ ರೀತಿಯಲ್ಲಿ ಬದಲಾವಣೆ ಮಾಡುವುದಕ್ಕೆ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಆದರೆ, ರೋಹಿತ್ ಶರ್ಮ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಪ್ರಕಾರ, ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲಬೇಕಾದರೆ ಹಿರಿಯ ಆಟಗಾರರು ಐಪಿಎಲ್ ಆಡಬಾರದು ಎಂಬುದಾಗಿ ಹೇಳಿದ್ದಾರೆ.
ಸ್ಪೋರ್ಟ್ಸ್‌ಕ್ರೀಡಾ ಜತೆ ಮಾತನಾಡಿದ ಅವರು “ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಯಂಥ ಹಿರಿಯ ಆಟಗಾರು ಐಪಿಎಲ್ ತ್ಯಜಿಸಿದರೆ ಮಾತ್ರ ಭಾರತ ತಂಡಕ್ಕೆ ಐಸಿಸಿ ಕಪ್ ಗೆಲ್ಲುವುದಕ್ಕೆ ಸಾಧ್ಯವಿದೆ. ಕಳೆದ ಏಳೆಂಟು ತಿಂಗಳಿಂದ ಟೀಮ್ ಇಂಡಿಯಾ ಸ್ಥಿರವಾಗಿಲ್ಲ. ವಿಶ್ವ ಕಪ್‌ಗೆ ತಯಾರಿ ನಡೆಸುವ ವೇಳೆಯೂ ಸ್ಥಿರವಾದ ತಂಡವೊಂದು ಇರಲಿಲ್ಲ. ಹಿರಿಯ ಆಟಗಾರರು ಸರಣಿಗಳಿಂದ ವಂಚಿತರಾಗುತ್ತಿದ್ದರು. ಯಾರೊ ಬಂದು ಇನಿಂಗ್ಸ್ ಆರಂಭಿಸುವುದು, ಇನ್ಯಾರೊ ಬಂದು ಬೌಲಿಂಗ್ ಮಾಡುವುದೆಲ್ಲನಡೆಯುತ್ತಿತ್ತು,” ಎಂಬುದಾಗಿ ಅವರು ಹೇಳಿದ್ದಾರೆ.
“ಹಿರಿಯ ಆಟಗಾರರು ಪ್ರಮುಖ ಸರಣಿಗಳಿಗೆ ಗೈರು ಹಾಜರಾಗುತ್ತಿದ್ದರು. ಒತ್ತಡ ನಿರ್ವಹಣೆ ನೆಪದಲ್ಲಿ ಅವರಿಗೆ ರಜೆ ನೀಡಲಾಗುತ್ತಿತ್ತು. ಅಷ್ಟೊಂದು ಒತ್ತಡ ಇದ್ದರೆ ಅವರು ಯಾಕೆ ಐಪಿಎಲ್‌ನಲ್ಲಿ ಆಡುತ್ತಾರೆ. ಒಂದು ವೇಳೆ ವಿಶ್ವ ಕಪ್ ಗೆಲ್ಲುವುದೇ ಗುರಿಯಾದರೆ ಐಪಿಎಲ್ ಬಿಡುವುದು ಉತ್ತಮ. ಎಲ್ಲರೂ ವೃತ್ತಿಪರ ಕ್ರಿಕೆಟಿಗರು. ಯಾರಿಗೂ ಗೌರವಾನ್ವಿತ ಹುದ್ದೆಯಲ್ಲ. ಹೀಗಾಗಿ ಅಂತಾರಾಷ್ಟ್ರಿಯ ಕ್ರಿಕೆಟ್ ಟೂರ್ನಿ ಆಡುವ ವಿಚಾರದಲ್ಲಿ ನಿಯಮದ ಸಡಿಲಿಕೆ ಸರಿಯಲ್ಲ,”ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದ | INDvsNZ | 37 ರನ್ ಬಾರಿಸಿ ಇಬ್ಬಿಬ್ಬರ ದಾಖಲೆ ಮುರಿದ ಟೀಮ್ ಇಂಡಿಯಾದ ಆಲ್‌ರೌಂಡರ್