Site icon Vistara News

RR vs RCB: ಆರ್​ಸಿಬಿ ವಿರುದ್ಧ ಸಂಪೂರ್ಣ ಪಿಂಕ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ರಾಜಸ್ಥಾನ್​; ಉದ್ದೇಶವೇನು?

RR vs RCB

ಜೈಪುರ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RR vs RCB) ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್​ ರಾಯಲ್ಸ್​ ಪೂರ್ಣ ಪ್ರಮಾಣದ ಪಿಂಕ್​ ಜೆರ್ಸಿಯಲ್ಲಿ(Rajasthan Royals Jersey) ಕಣಕ್ಕಿಳಿಯಲಿದೆ. ಈ ಮೂಲಕ ಪಂದ್ಯವನ್ನು ಮಹಿಳೆಯರಿಗೆ ಅರ್ಪಣೆ ಮಾಡಲಿದೆ. PinkPromise ಮಿಷನ್ ಅಡಿಯಲ್ಲಿ ಮಹಿಳೆಯರನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಗುವುದು. ಪಂದ್ಯದ ವೇಳೆ ದಾಖಲಾಗುವ ಪ್ರತೀ ಸಿಕ್ಸರ್​ಗೆ ರಾಜಸ್ಥಾನದಲ್ಲಿರುವ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ಫ್ರಾಂಚೈಸಿ ನೀಡಲಿದೆ. ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು ಪಂದ್ಯದ ದಿನದ ಸಂಪೂರ್ಣ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿದೆ. ಈ ಕಾರ್ಯವನ್ನು ನಡೆಸಲೆಂದೇ ರಾಜಸ್ಥಾನ್‌ ರಾಯಲ್ಸ್‌ ಫೌಂಡೇಶನ್‌ ಎಂಬ ಸಂಸ್ಥೆ ಸ್ಥಾಪನೆಯಾಗಿದೆ. ಈಗಾಗಲೇ ಫ್ರಾಂಚೈಸಿ ಪಿಂಕ್​ ಜೆರ್ಸಿಯನ್ನು ಮತ್ತು ಈ ದಿನದ ವಿಶೇಷ ಯೋಜನೆಗಳನ್ನು ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ವಿಡಿಯೊ ಮೂಲಕ ಮಾಹಿತಿ ನೀಡಿದೆ. ಸಂಪೂರ್ಣವಾಗಿ ಈ ಪಂದ್ಯವನ್ನು ಮಹಿಳೆಯರ ಏಳಿಗೆಗೆ ಮೀಸಲಿಟ್ಟಿದೆ.

ಆರ್​ಸಿಬಿ ನೋಡಿ ಕಲಿಯಬೇಕಿದೆ


ಆರ್​ಸಿಬಿ ತನ್ನ ಅಭಿಮಾನಿಗಳಿಗಾಗಿ ಅನ್​ಬಾಕ್ಸ್​ ಕಾರ್ಯಕ್ರಮವೊಂದನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದರೂ ಕೂಡ ಇದರಿಂದ ಒಂದು ರೂ. ಕೂಡ ಯಾರಿಗೂ ಉಪಕಾರವಿಲ್ಲ. ಹಣ ಮಾಡುವ ಉದ್ದೇಶದಿಂದಲೇ ಫ್ರಾಂಚೈಸಿ ಈ ಕಾರ್ಯಕ್ರಮವನ್ನು ಮಾಡುತ್ತಿದೆ. ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ದುಬಾರಿ ಬೆಲೆಯ ಟಿಕೆಟ್​ ನಿಗದಿಪಡಿಸಿ ಹಣಗಳಿಸುತ್ತಿದೆ. ಜತೆಗೆ ಬೇರೆ ಯಾವುದೇ ಫ್ರಾಂಚೈಸಿಗಳ ಪಂದ್ಯಕ್ಕೂ ಇರದ ಟಿಕೆಟ್​ ಬೆಲೆ ಆರ್​ಸಿಬಿ ಪಂದ್ಯಗಳಿಗೆ ಇರುತ್ತದೆ. ಒಟ್ಟಾರೆ ಆರ್​ಸಿಬಿ ಫ್ರಾಂಚೈಸಿದ್ದು ಹಣ ಮಾಡುವ ಉದ್ದೇಶ ಮಾತ್ರವಾಗಿದೆ. ಈಗಾಗಲೇ ಆರ್​ಸಿಬಿಯ ಅಭಿಮಾನಿಗಳು ಕೂಡ ಈ ಬಗ್ಗೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರ್​ಸಿಬಿ ರಾಜಸ್ಥಾನ ಫ್ರಾಂಚೈಸಿಯನ್ನು ನೋಡಿ ಕಲಿಯಬೇಕಿದೆ.

ಇದನ್ನೂ ಓದಿ IPL 2024 Points Table: ಹಾಲಿ ಚಾಂಪಿಯನ್​ ಚೆನ್ನೈಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಮೇಲೇರಿದ ಹೈದರಾಬಾದ್​

ರಾಜಸ್ಥಾನ್​ ತಂಡ ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಬಲಿಷ್ಠವಾಗಿದೆ. ಈ ತಂಡ ಕೇವಲ ಒಂದೆರಡು ಆಟಗಾರರ ಪ್ರದರ್ಶನವನ್ನು ನೆಚ್ಚಿಕೊಂಡು ಆಡುತ್ತಿಲ್ಲ. ಜೈಸ್ವಾಲ್​, ಬಟ್ಲರ್​ ಇದುವರೆಗೂ ಫಾರ್ಮ್​ ಕಂಡುಕೊಳ್ಳದಿದ್ದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಆಡಿದ ಮೂರು ಪಂದ್ಯಗಳನ್ನು ಕೂಡ ಗೆದ್ದಿದೆ. ಯಾರಾದರೊಬ್ಬರು ಸಿಡಿದು ನಿಂತು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ಆರ್​ಸಿಬಿ ಮಾಜಿ ಸ್ಪಿನ್ನರ್​ ಯಜುವೇಂದ್ರ ಚಹಲ್​, ಆರ್​ ಅಶ್ವಿನ್, ಟ್ರೆಂಟ್​ ಬೌಲ್ಟ್​, ಬರ್ಗರ್​, ಸಂದೀಪ್​ ಶರ್ಮ, ಅವೇಶ್​ ಖಾನ್​ ಎಲ್ಲರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವಿಗಳೆ. ಹೀಗಾಗಿ ಇವರಿಗೆ ಎದುರಾಳಿ ಆಟಗಾರರನ್ನು ಹೇಗೆ ಕಟ್ಟಿ ಹಾಕಬೇಕೆನ್ನುವುದು ಸ್ಪಷ್ಟವಾಗಿ ತಿಳಿದಿದೆ.

ಸಂಭಾವ್ಯ ತಂಡ

ರಾಜಸ್ಥಾನ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್​ ಲೋಮ್ರೋರ್​, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್​ ಕೀಪರ್​), ಮಯಾಂಕ್ ಡಾಗರ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.

Exit mobile version