ಚೆನ್ನೈ: ಕೆಕೆಆರ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲು ಕಂಡ ಸನ್ರೈಸರ್ಸ್ ಹೈದರಾಬಾದ್(RR vs SRH) ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆಲುವು ಕಂಡ ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ನಡೆಯುವ ದ್ವಿತೀಯ ಕ್ವಾಲಿಫೈಯರ್(SRH Vs RR Qualifier 2) ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರೂ ಕೂಡ ಇದೇ ಮೈದಾನದಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಈ ತಂಡ ಯಾವುದು ಎನ್ನುವುದು ಇಂದಿನ ಪಂದ್ಯದ ಕುತೂಹಲ.
ಹವಾಮಾನ ವರದಿ
ಚೆನ್ನೈನಲ್ಲಿ(MA Chidambaram Stadium Weather Report) ಇಂದು ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದೆ. ಸಮುದ್ರ ಭಾಗದಲ್ಲಿ ಈ ಸ್ಟೇಡಿಯಂ ಇರುವ ಕಾರಣ ರಾತ್ರಿ ಇಲ್ಲಿ ಮಂಜು ಕೂಡ ಬೀಳಲಿದೆ. ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಸಂಪೂರ್ಣವಾಗಿ ಪಂದ್ಯ ಸಾಗಲಿದೆ.
ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರ ಲಾಭ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಿಗಲಿದೆ. ಹೈದರಾಬಾದ್ ತಂಡ ಲೀಗ್ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು.
ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ
ಬಲಾಬಲ
ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್ 10, ರಾಜಸ್ಥಾನ್ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.
ಲೀಗ್ನಲ್ಲಿ 1 ರನ್ ಗೆಲುವು
ಈ ಬಾರಿಯ ಲೀಗ್ನಲ್ಲಿ ಇತ್ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚವಾಗಿ ಸಾಗಿದ ಈ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ 1 ರನ್ ಅಂತರದಿಂದ ಗೆದ್ದು ಬೀಗಿತ್ತು. ಭುವನೇಶ್ವರ್ ಕುಮಾರ್ ಅಂತಿಮ ಎಸೆತದಲ್ಲಿ ರೋಮ್ಮನ್ ಪೋವೆಲ್ ಅವರನ್ನು ಎಲ್ಬಿಡ್ಲ್ಯು ಮಾಡುವ ಮೂಲಕ ಈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಸೋಲಿಗೆ ರಾಜಸ್ಥಾನ್ ಕ್ವಾಲಿಫೈಯರ್ ಪಂದ್ಯದಲ್ಲಿ ಸೇಡು ತೀರಿಸಲು ಪಣ ತೊಟ್ಟಿದೆ.
ಪಿಚ್ ರಿಪೋರ್ಟ್
ಚೆನ್ನೈಯ ಎಂ.ಎ.ಚಿದಂಬರಂ ಮೈದಾನ ಪಿಚ್ ನಿಧಾನಗತಿಯಿಂದ ಕೂಡಿದೆ. ಸ್ಪಿನ್ ಸ್ನೇಹಿಯಾಗಿದ್ದರೂ ಕೂಡ ಈ ಮೈದಾನ ಹೈ ಸ್ಕೋರಿಂಗ್ ಪಂದ್ಯ ಕೂಡ ಕಂಡುಬಂದಿದೆ. ಚೆನ್ನೈ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಚೆನ್ನೈ 210 ರನ್ ಬಾರಿಸಿತ್ತು. ಈ ಬೃಹತ್ ಮೊತ್ತವನ್ನು ಲಕ್ನೋ ತಂಡ 19.3 ಓವನ್‌ನಲ್ಲೇ ಗುರಿ ತಲುಪಿತ್ತು. ಹೀಗಾಗಿ ಪಿಚ್ ವರ್ತನೆಯನ್ನು ಸ್ಪಷ್ಟವಾಗಿ ಹೇಳುವುದು ಕೊಂಚ ಕಷ್ಟವಾಗಿದೆ. ಮಂಜಿನ ಕಾಟ ಇರುವ ಕಾರಣ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.