ಸೆಂಚುರಿಯನ್: ಪ್ರವಾಸಿ ಆಸ್ಟ್ರೇಲಿಯಾ(RSA vs AUS) ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರಚಂಡ ಪ್ರದರ್ಶನ ತೋರುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ. ಅಲ್ಲದೆ ಈ ಪಂದ್ಯವನ್ನು 164 ರನ್ಗಳಿಂದ ಗೆದ್ದು ಬೀಗಿದೆ. ಹೆನ್ರಿಕ್ ಕ್ಲಾಸೆನ್(Heinrich Klaasen) ಮತ್ತು ಡೇವಿಡ್ ಮಿಲ್ಲರ್(David Miller) ಅವರ ಬ್ಯಾಟಿಂಗ್ ವೈಭವ ಕಂಡು ಕ್ರಿಕೆಟ್ ಪ್ರೇಮಿಗಳು ಬೆರಗಾಗಿದ್ದಾರೆ.
ಶುಕ್ರವಾರ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ವಿಲ್ಲರ್ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 416 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 34.5 ಓವರ್ಗಳಲ್ಲಿ 252 ರನ್ಗೆ ಸರ್ವಪತನ ಕಂಡಿತು. ಈ ಪಂದ್ಯ ಗೆಲ್ಲುವ ಮೂಲಕ ದಕ್ಷಿ ಆಫ್ರಿಕಾ ಸರಣಿಯನ್ನು ಜೀವಂತವಿರಿಸಿತು. ಸದ್ಯ 5 ಪಂದ್ಯಗಳ ಈ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಿವೆ. ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.
ಸಿಕ್ಸರ್ಗಳ ಸುರಿಮಳೆ
ಆಸ್ಟ್ರೇಲಿಯಾ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಕ್ಲಾಸೆನ್ ಮತ್ತು ಮಿಲ್ಲರ್ ಸೆಂಚುರಿಯನ್ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಮುಂಚಿದರು. ಇವರ ಈ ಅಬ್ಬರದ ಬ್ಯಾಟಿಂಗ್ಗೆ ಆಸೀಸ್ ಬೌಲರ್ಗಳು ಮಾತ್ರವಲ್ಲ ಅಂಪೈರ್ಗಳು ಸುಸ್ತಾಗಿ ಹೋದರು. ಸಿಕ್ಸರ್, ಬೌಂಡರಿ ಸನ್ನೆ ಮಾಡಿಯೇ ಸಂಪೂರ್ಣವಾಗಿ ಬಳಲಿದರು.
ಹೆನ್ರಿಕ್ ಕ್ಲಾಸೆನ್ ಕೇವಲ 83 ಎಸೆತಗಳಿಂದ 174 ರನ್ ಬಾರಿಸಿ ಅಬ್ಬರಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ನಲ್ಲಿ ಸಿಡಿಸಿದ್ದು ಬರೋಬ್ಬರಿ ತಲಾ 13 ಸಿಕ್ಸರ್ ಮತ್ತು ಬೌಂಡರಿ. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಡೇವಿಡ್ ಮಿಲ್ಲರ್ 45 ಎಸೆತಗಳಿಂದ ಅಜೇಯ 82 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ದಾಖಲಾಯಿತು.
ಇದನ್ನೂ ಓದಿ ICC World Cup 2023: ಅಮಿತಾಬ್ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ; ಈ ಟಿಕೆಟ್ನ ಮಹತ್ವವೇನು?
A knock to remember for the ages…
— ICC (@ICC) September 15, 2023
Take a bow, Heinrich Klaasen 🙌#SAvAUS pic.twitter.com/DMfLvAruF5
ಜತೆಯಾಟದಲ್ಲಿ ದಾಖಲೆ
ಕ್ಲಾಸೆನ್ ಮತ್ತು ಮಿಲ್ಲರ್ 5ನೇ ವಿಕೆಟಿಗೆ 222 ರನ್ಗಳ ಬೃಹತ್ ಜತೆಯಾಟ ನಡೆಸುವ ಮೂಲಕ ದಾಖಲೆಯೊಂದನ್ನು ಬರೆದುರು. ಏಕದಿನದ ಕ್ರಿಕೆಟ್ನಲ್ಲಿ ಅತೀ ದೊಡ್ಡ ಜತೆಯಾಟ ನಡೆಸಿದ 6ನೇ ಜೋಡಿ ಎನಿಸಿಕೊಂಡರು. ಇದಲ್ಲದೆ ಏಕದಿನ ಇತಿಹಾಸದಲ್ಲಿ 400 ಪ್ಲಸ್ ರನ್ ಬಾರಿಸಿ ಭಾರತದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಹಿಂದಿಕ್ಕಿತು. ಭಾರತ 6 ಸಲ ಈ ಸಾಧನೆ ಮಾಡಿತ್ತು. ಆದರೆ ಈಗ ದಕ್ಷಿಣ ಆಫ್ರಿಕಾ 7 ಬಾರಿ ಈ ಸಾಧನೆ ಮಾಡಿ ಮುಂದೆ ಸಾಗಿದೆ. ತಂಡವೊಂದು ಏಕದಿನ ಮಾದರಿಯಲ್ಲಿ 400 ರನ್ ಪೇರಿಸಿದ 22ನೇ ನಿದರ್ಶನ ಇದಾಗಿದೆ.
ವಿಶ್ವಕಪ್ಗೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವಾಗ ದಕ್ಷಿಣ ಆಫ್ರಿಕಾ ತಂಡದ ಈ ಪ್ರದರ್ಶನ ಇತರ ತಂಡಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ. ಚೋಕರ್ಸ್ ಹಣೆಪಟ್ಟಿಯನ್ನು ಈ ಬಾರಿ ಕಳಚಿಕೊಂಡಿತೇ ಎನ್ನುವುದು ವಿಶ್ವಕಪ್ನ ಕೌತುಕ.