ನ್ಯೂಯಾರ್ಕ್: ಸೋಮವಾರ ರಾತ್ರಿ ನಡೆದ ಟಿ20 ವಿಶ್ವಕಪ್(T20 World Cup 2024) ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ(RSA vs BAN) ವಿರುದ್ಧ 4 ರನ್ಗಳ ವಿರೋಚಿತ ಸೋಲು ಕಂಡಿತ್ತು. ಬಾಂಗ್ಲಾ ತಂಡದ ಸೋಲಿಗೆ ಐಸಿಸಿಯ ಹೊಸ ನಿಯಮವೇ(Major DRS Controversy) ಕಾರಣ ಎಂಬ ಆರೋಪ ಕೇಳಿಬಂದಿದೆ.
ಹೌದು, ಈ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡು ತಪ್ಪು ನಿರ್ಧಾರ(ICC Rule Exposed) ಮತ್ತು ವಿವಾದಾತ್ಮಕ ಡಿಆರ್‌ಎಸ್ ನಿಯಮದಿಂದಾಗಿ ಬಾಂಗ್ಲಾದೇಶ ಸೋಲು ಕಂಡಿದೆ ಎಂದು ಬಾಂಗ್ಲಾ ಆಟಗಾರರು ಸೇರಿ ಅನೇಕ ಮಾಜಿ ಕ್ರಿಕೆಟಿಗರು ಕೂಡ ಚರ್ಚೆ ನಡೆಸುತ್ತಿದ್ದಾರೆ. ಚೇಸಿಂಗ್ ನಡೆಸುತ್ತಿದ್ದ ಬಾಂಗ್ಲಾದೇಶಕ್ಕೆ ಪಂದ್ಯ ಗೆಲ್ಲಲು 24 ಎಸೆತಗಳಲ್ಲಿ 27 ರನ್ ಗಳಿಸಬೇಕಿತ್ತು. 4 ವಿಕೆಟ್ ಕೂಡ ಕೈಯಲ್ಲಿತ್ತು. ಅನುಭವಿ ಮಹಮ್ಮದುಲ್ಲಾ ಮತ್ತು ತೌಹೀದ್ ಹೃದಯ ಕ್ರೀಸ್ನಲ್ಲಿದ್ದರು.
17ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಒಟ್ನೀಲ್ ಬಾರ್ಟ್‌ಮನ್ ಅವರ ಎರಡನೇ ಎಸೆತದಲ್ಲಿ ಮಹಮ್ಮದುಲ್ಲಾ ಫ್ಲಿಕ್ ಶಾಟ್ ಹೊಡೆಯುವು ಪ್ರಯತ್ನದಲ್ಲಿ ವಿಫಲರಾದರು. ಆದರೆ, ಚೆಂಡು ಅವರ ಪ್ಯಾಡ್‌ಗೆ ತಾಗಿ ಬೌಂಡರಿ ದಾಖಲಾಯಿತು. ಚೆಂಡು ಪ್ಯಾಡ್‌ಗೆ ತಾಗಿದ ಕಾರಣ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಎಲ್ಬಿಡಬ್ಲ್ಯುಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡಿದರು. ಈ ವೇಳೆ ಮಹಮ್ಮದುಲ್ಲಾ ರಿವ್ಯೂ ಪಡೆದರು. ಫೀಲ್ಡ್ ಅಂಪೈರ್ ಈ ತೀರ್ಪನ್ನು ಮೂರನೇ ಅಂಪೈರ್ಗೆ ನೀಡಿದರು. ಮೂರನೇ ಅಂಪೈರ್ ಇದನ್ನು ಪರೀಕ್ಷಿಸುವ ವೇಳೆ ಚೆಂಡು ಇಂಪ್ಯಾಕ್ಟ್ ಲೈನ್ನಲ್ಲಿ ಇದ್ದರೂ ವಿಕೆಟ್ ಮಿಸ್ಸಿಂಗ್ ಇರುವುದು ಕಂಡು ಬಂತು. ಹೀಗಾಗಿ ನಾಟೌಟ್ ನಿರ್ಧಾರ ಪ್ರಕಟಿಸಿದರು. ಆದರೆ, ಲೆಗ್ ಬೈ ಆಗಿ ಬಂದ ಬೌಂಡರಿ ರನ್ ಮಾತ್ರ ಬಾಂಗ್ಲಾ ತಂಡಕ್ಕೆ ನೀಡಲಿಲ್ಲ. ಇದು ಈಗ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ RSA vs BAN: ಹ್ಯಾಟ್ರಿಕ್ ಗೆಲುವು ಸಾಧಿಸಿ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ
ಹೊಸ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದಾಗ ಬಾಲ್ ಡೆಡ್ ಎಂದು ಪರಿಗಣಿಸಲ್ಪಡುತ್ತದೆ. ಹೀಗಾಗಿ ಈ ರನ್ ಬಾಂಗ್ಲಾ ತಂಡಕ್ಕೆ ಸಿಗಲಿಲ್ಲ. ಒಂದೊಮ್ಮೆ ಈ ರನ್ ಸಿಗುತ್ತಿದ್ದರೆ ಬಾಂಗ್ಲಾ ಗೆಲುವು ಸಾಧಿಸುತ್ತಿತ್ತು. ಏಕೆಂದರೆ ಬಾಂಗ್ಲಾ ಸೋತಿದ್ದು ಕೂಡ 4 ರನ್ ಅಂತರದಿಂದ. ಈ ನ್ಯೂನತೆಯ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಭಾರತ ಮಾಜಿ ಆಟಗಾರ ವಾಸಿಂ ಜಾಫರ್ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟ್ಗೆ 113 ರನ್ ಬಾರಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದ ವರೆಗೆ ಉತ್ತಮವಾಗಿ ಆಡಿ ಆ ಬಳಿಕ ಕುಸಿತ ಕಂಡು 7 ವಿಕೆಟ್ಗೆ 109 ರನ್ ಮಾತ್ರ ಗಳಿಸಿ ಸೋಲು ಕಂಡಿತು. 46 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.