ನ್ಯೂಯಾರ್ಕ್: ಸೋಮವಾರ ರಾತ್ರಿ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ದಕ್ಷಿಣ ಆಫ್ರಿಕಾ(RSA vs BAN) ತಂಡ ಬಾಂಗ್ಲಾದೇಶ ವಿರುದ್ಧ ರೋಚಕ 4 ರನ್ಗಳ ಅಂತರದಿಂದ ಗೆದ್ದು ಬೀಗಿದೆ. ಜತೆಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಹರಿಣ ಪಡೆ ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ(T20 World Cup 2024) ಮೊದಲ ತಂಡವಾಗಿ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಇದು ದಕ್ಷಿಣ ಆಫ್ರಿಕಾಗೆ ಒಲಿದ ಹ್ಯಾಟ್ರಿಕ್ ಗೆಲುವಾಗಿದೆ.
ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟ್ಗೆ 113 ರನ್ ಬಾರಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದ ವರೆಗೆ ಉತ್ತಮವಾಗಿ ಆಡಿ ಆ ಬಳಿಕ ಕುಸಿತ ಕಂಡು 7 ವಿಕೆಟ್ಗೆ 109 ರನ್ ಮಾತ್ರ ಗಳಿಸಿ ಸೋಲು ಕಂಡಿತು. 46 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ IND vs PAK : ಭಾರತ ವಿರುದ್ಧ ಸೋಲುವುದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಪಾಕ್ ಆಟಗಾರ; ಆರೋಪ
ಬ್ಯಾಟಿಂಗ್ಗೆ ಅಪಾಯಕಾರಿಯಾದ ಪಿಚ್ನಲ್ಲಿ ಚೇಸಿಂಗ್ ನಡೆಸಿದ ಬಾಂಗ್ಲಾ ಬ್ಯಾಟರ್ಗಳು ಆರಂಭಿಕ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡರು. ತೌಹಿದ್ ಹೃದಯೊಯ್ ಮತ್ತು ಅನುಭವಿ ಮಹಮ್ಮದುಲ್ಲ ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡಕ್ಕೆ ನೆರವಾದರು. 4 ವಿಕೆಟ್ಗೆ 44 ರನ್ ಒಟ್ಟುಗೂಡಿಸಿದರು. ಈ ಜೋಡಿ ಕ್ರೀಸ್ನಲ್ಲಿ ಇರುವ ತನಕ ಗೆಲುವು ಬಾಂಗ್ಲಾ ತಂಡದ ಪರ ಇತ್ತು. ಆದರೆ, ಉಭಯ ಆಟಗಾರರ ವಿಕೆಟ್ ಪತನಗೊಂಡದ್ದೇ ತಡ ಆ ಬಳಿಕ ಬಂದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಮಹಮ್ಮದುಲ್ಲ 20 ರನ್ ಬಾರಿಸಿದರೆ, ಹೃದಯೊಯ್ 37 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್ ಹೋರಾಟ ವ್ಯರ್ಥಗೊಂಡಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಕಳೆದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಆರಂಭಿ ಆಘಾತವನ್ನು ಈ ಪಂದ್ಯದಲ್ಲಿಯೂ ಎದುರಿಸಿತು. ಕ್ವಿಂಟನ್ ಡಿ ಕಾಕ್(18), ರೀಜಾ ಹೆಂಡ್ರಿಕ್ಸ್(0), ನಾಯಕ ಮಾರ್ಕ್ರಮ್(4) ಮತ್ತು ಟ್ರಿಸ್ಟಾನ್ ಸ್ಟಬ್ಸ್(0) ಬ್ಯಾಟಿಂಗ್ ವೈಫಲ್ಯ ಕಂಡು ಬೇಗನೆ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಆಟಗಾರ ಹೆನ್ರಿಚ್ ಕ್ಲಾಸೆನ್ ಮತ್ತು ಕಳೆದ ಪಂದ್ಯದ ಗೆಲುವುವಿನ ಹೀರೊ ಡೇವಿಡ್ ಮಿಲ್ಲರ್ ಅವರು ನಡೆಸಿದ ಬ್ಯಾಟಿಂಗ್ ಹೋರಾಟದಿಂದ ತಂಡ 100ರ ಗಡಿ ದಾಟಿತು.
ಕ್ಲಾಸೆನ್ 3 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 46 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 29 ರನ್ ಗಳಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ ಪರ ಹಸನ್ ಸಾಕಿಬ್ 18 ರನ್ಗೆ 3 ವಿಕೆಟ್ ಕಿತ್ತು ಮಿಂಚಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಪ್ರದರ್ಶನ ವ್ಯರ್ಥಗೊಂಡಿತು.