ಕಿಂಗ್ಸ್‌ಟೌನ್: ಶನಿವಾರ ನಡೆದ ರೋಚಕ ಟಿ20 ವಿಶ್ವಕಪ್(T20 World Cup 2024) ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(RSA vs NEP) ತಂಡ ನೇಪಾಳ(South Africa vs Nepal) ವಿರುದ್ಧ 1 ರನ್ಗಳ ಗೆಲುವು ಸಾಧಿಸಿದೆ. ದಿನದ ಮತ್ತೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್(New Zealand vs Uganda) ತಂಡ ಕ್ರಿಕೆಟ್ ಶಿಶು ಉಗಾಂಡ ವಿರುದ್ಧ 9 ವಿಕೆಟ್ಗಳ ಗೆಲುವು ಸಾಧಿಸಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಆದರೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದ ಕಾರಣ ಕಿವೀಸ್ಗೆ ಈ ಗೆಲುವು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ.
ದಕ್ಷಿಣ ಆಫ್ರಿಕಾ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿಣ ಪಡೆ ರೀಜಾ ಹೆಂಡ್ರಿಕ್ಸ್(43) ಅವರ ಏಕಾಂಗಿ ಹೋರಾಟದ ನೆರವಿನಿಂದ 7 ವಿಕೆಟ್ಗೆ 115 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ ಅಂತಿಮ ಓವರ್ನ 2 ಎಸೆತದಲ್ಲಿ ಗೆಲುವಿಗೆ 2 ರನ್ ಬಾರಿಸಲು ಸಾಧ್ಯವಾಗದೆ ವಿರೋಚಿತ 1 ರನ್ ಅಂತರದ ಸೋಲು ಕಂಡಿತು. ಅಂತಿಮವಾಗಿ 7 ವಿಕೆಟ್ಗೆ 114 ರನ್ ಬಾರಿಸಿತು. ಒಂದು ರನ್ ಗಳಿಸುತ್ತಿದ್ದರೂ ಕೂಡ ಪಂದ್ಯ ಟೈ ಗೊಂಡು ಸೂಪರ್ ಓವರ್ ಕಾಣುತ್ತಿತ್ತು. ಆದರೆ ಗುಲ್ಸನ್ ಝಾ ರನೌಟ್ ಬಲೆಗೆ ಬಿದ್ದು ತಂಡ ಸೋಲಿಗೆ ತುತ್ತಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ ಸ್ಪಿನ್ ಮ್ಯಾಚಿಕ್ ನಡೆಸಿ 4 ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ IND vs CAN: ಇಂದು ಭಾರತ-ಕೆನಡಾ ಪಂದ್ಯ ಅನುಮಾನ; ಭಾರೀ ಮಳೆ ಎಚ್ಚರಿಕೆ ನೀಡಿದ ಹಮಾಮಾನ ಇಲಾಖೆ
ಚೇಸಿಂಗ್ ಆರಂಭಿಸಿದ ನೇಪಾಳ ಉತ್ತಮ ಆರಂಭ ಗಳಿಸಿದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಆದರೆ ಗೆಲ್ಲುವ ಅವಕಾಶವೂ ಇತ್ತು. ಅಂತಿಮ ಓವರ್ನಲ್ಲಿ ಗೆಲುವಿಗೆ 8 ರನ್ ಬೇಕಿತ್ತು. ಈ ಓವರ್ ಎಸೆದ ಒಟ್ನೀಲ್ ಬಾರ್ಟ್ಮನ್ ಮೊದಲ 2 ಎಸೆತವನ್ನು ಡಾಟ್ ಮಾಡಿದರು. ಮೂರನೇ ಎಸೆತದಲ್ಲಿ ಗುಲ್ಸನ್ ಝಾ ಬೌಂಡರಿ ಬಾರಿಸಿದ ಪರಿಣಾಮ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಮುಂದಿನ ಎಸೆತದಲ್ಲಿ ಗುಲ್ಸನ್ 2 ರನ್ ಕಸಿದರು. ಅಂತಿಮವಾಗಿ 2 ಎಸೆತದ ಮುಂದೆ 2 ರನ್ ತೆಗೆಯುವ ಸವಾಲು ಎದುರಾಯಿತು. 5ನೇ ಎಸೆತವನ್ನು ಗುಲ್ಸನ್ ಡಾಟ್ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಗುಲ್ಸನ್ ರನೌಟ್ ಆದರು. ದಕ್ಷಿಣ ಆಫ್ರಿಕಾ 1 ರನ್ ಅಂತರದ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಹೊರತುಪಡಿಸಿ ಉಳಿದೆಲ್ಲರೂ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡರು. ಯಾರು ಕೂಡ ಕನಿಷ್ಠ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಿಂದ ಅಜೇಯ 27 ರನ್ ಬಾರಿಸಿದರು. ಹೆಂಡ್ರಿಕ್ಸ್ 43 ರನ್ ಬಾರಿಸಿದರು. ನಾಯಕ ಐಡೆನ್ ಮಾರ್ಕ್ರಮ್(15) ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು.
ಕೊನೆಗೂ ಗೆದ್ದ ಕಿವೀಸ್
ದಿನದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉಗಾಂಡ 18.4 ಓವರ್ಗಳಲ್ಲಿ 40 ರನ್ಗೆ ಆಲೌಟ್ ಆಯಿತು. ನ್ಯೂಜಿಲ್ಯಾಂಡ್ ಈ ಮೊತ್ತವನ್ನು ಕೇವಲ 1 ವಿಕೆಟ್ನಷ್ಟಕ್ಕೆ 41 ರನ್ ಬಾರಿಸಿ 9 ವಿಕೆಟ್ಗಳ ಗೆಲುವು ಸಾಧಿಸಿತು.