Site icon Vistara News

S. Sreesanth: ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ವಿರುದ್ಧ ಎಫ್‌ಐಆರ್‌ ದಾಖಲು; ಮತ್ತೆ ಬಂಧನ ಭೀತಿ!

S Sreesanth

ತಿರುವನಂತಪುರಂ: ಮ್ಯಾಚ್​ ಫಿಕ್ಸಿಂಗ್​ ಆರೋಪದಲ್ಲಿ ಭಾರಿ ಸುದ್ದಿಯಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಎಸ್‌.ಶ್ರೀಶಾಂತ್‌(S. Sreesanth) ಮತ್ತೆ ವಿವಾದದಿಂದ ಸುದ್ದಿಯಾಗಿದ್ದಾರೆ. ವಂಚನೆ(FIR For Cheating Case) ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೇರಳದ ಸರೀಶ್ ಗೋಪಾಲನ್ ಎಂಬ ಯುವಕ ವಂಚನೆ ಆರೋಪ ಮಾಡಿದ್ದಾರೆ. ಹೀಗಾಗಿ ಶ್ರೀಶಾಂತ್​ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ

ಎಸ್‌.ಶ್ರೀಶಾಂತ್‌ ಮತ್ತು ಅವರ ಸ್ನೇಹಿತರಾಗಿರುವ ರಾಜೀವ್ ಕಮಾರ್ ಮತ್ತು ವೆಂಕಟೇಶ್‌ ಕಿಣಿ ಎಂಬವರು ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಿಸಲು ಹಣ ಪಡೆದು ವಂಚಿಸಿದ್ದಾರೆ ಎಂದಯ ದೂರುದಾರ ಸರೀಶ್ ಗೋಪಾಲನ್ ಎಂಬವರು ಈ ಮೂವರ ವಿರುದ್ಧ ಪೊಲೀಸರಿಗೆ ವಂಚನೆ ಆರೋಪ ಮಾಡಿ ದೂರು ನೀಡಿದ್ದರು. ಏಪ್ರಿಲ್ 25, 2019ರಿಂದ ಈ ಮೂವರಿಂದ ತನಗೆ 18.7 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ತಿಳಿಸಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಮೂವರ ವಿರುದ್ಧ ಐಪಿಸಿ ಸೆಕ್ಷನ್ 420 ಮೂಲಕ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆರೋಪ ಸುಳ್ಳು ಎಂದ ಶ್ರೀಶಾಂತ್

ಶ್ರೀಶಾಂತ್ ಅವರು ಈ ಪ್ರಕರಣದ ಕುರಿತು ಪ್ರತಿಕ್ರಿಯಿದ್ದು “ನಾನು ಯಾರ ಬಳಿಯೂ ಯಾವುದೇ ಹಣಕಾಸಿನ ವಹಿವಾಟು ಅಥವಾ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇದೊಂದು ರೂಪಿತ ಸಂಚು” ಎಂದು ಹೇಳಿದ್ದಾರೆ.

2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾಗ ಶ್ರೀಶಾಂತ್‌ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಸುದೀರ್ಘ ವಿಚಾರಣೆಯ ನಂತರ ದೆಹಲಿ ಹೈಕೋರ್ಟ್ ಇವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇದಾದ ಬಳಿಕ ಬಿಸಿಸಿಐ ಕೂಡ ಶ್ರೀಶಾಂತ್ ಅವರ ನಿಷೇಧವನ್ನು 7 ವರ್ಷಕ್ಕಿಳಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಈ ನಿಷೇಧದಿಂದ ಮುಕ್ತರಾಗಿದ್ದರು. ಆದರೆ ಈ ನಿಷೇಧ ಮುಗಿಯುವಷ್ಟರಲ್ಲಿ ಅವರ ವಯಸ್ಸು ಕೂಡ 40ರ ಸನಿಹಕ್ಕೆ ಬಂದಿತ್ತು. ಹೀಗಾಗಿ ಅವರ ಕ್ರಿಕೆಟ್ ಜೀವನ ಫಿಕ್ಸಿಂಗ್​ನಿಂದಾಗಿ ದುರಂತ ಅಂತ್ಯ ಕಂಡಿತ್ತು.

ಇದನ್ನೂ ಓದಿ IPL 2023: 10 ವರ್ಷಗಳ ಬಳಿಕ ಮತ್ತೆ ಐಪಿಎಲ್​ಗೆ ಆಗಮಿಸಿದ ವೇಗಿ ಎಸ್​. ಶ್ರೀಶಾಂತ್​

ಶ್ರೀಶಾಂತ್‌ 2005-2011ರ ಅವಧಿಯಲ್ಲಿ ಭಾರತದ ಪರ 27 ಟೆಸ್ಟ್‌, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 87, 75 ಹಾಗೂ 7 ವಿಕೆಟ್‌ ಉರುಳಿಸಿದ್ದಾರೆ. 2007ರ ಟಿ20 ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯನೆಂಬುದು ಶ್ರೀಶಾಂತ್‌ ಪಾಲಿನ ಹೆಗ್ಗಳಿಕೆ. 2011ರಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಒಟ್ಟು 44 ಪಂದ್ಯಗಳನ್ನಾಡಿದ್ದ ಶ್ರೀಶಾಂತ್ 40 ವಿಕೆಟ್ ಕಬಳಿಸಿ ಮಿಂಚಿದ್ದರು.

Exit mobile version