ಪುಣೆ: ಬುಧವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(New Zealand vs South Africa) ತಂಡ ನ್ಯೂಜಿಲ್ಯಾಂಡ್ ವಿರುದ್ಧ ಬೃಹತ್ ಮೊತ್ತದ ಗೆಲುವು ಸಾಧಿಸುವ ಜತೆಗೆ ಸಿಕ್ಸರ್(Most sixes hit by a team in a WC edition) ಮೂಲಕವೂ ದಾಖಲೆಯೊಂದನ್ನು ಬರೆದಿದೆ. ವಿಶ್ವಕಪ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ್ದ ಇಂಗ್ಲೆಂಡ್ ದಾಖಲೆಯನ್ನು ಹಿಂದಿಕ್ಕಿದೆ.
2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ 11 ಪಂದ್ಯಗಳಲ್ಲಿ 76 ಸಿಕ್ಸರ್ ಸಿಡಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ಕೇವಲ 7 ಪಂದ್ಯಗಳಲ್ಲೇ ಈ ದಾಖಲೆ ಮುರಿದಿದೆ. ಸದ್ಯ ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ 82 ಸಿಕ್ಸರ್ ಬಾರಿಸಿದೆ. ಇನ್ನು 2 ಪಂದ್ಯಗಳು ಬಾಕಿ ಉಳಿದಿದ್ದು 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದೆ.
ಸದ್ಯ ದಕ್ಷಿಣ ಆಫ್ರಿಕಾ ಪರ ಹಾಲಿ ಆವೃತ್ತಿಯಲ್ಲಿ ನಾಲ್ಕು ಶತಕ ದಾಖಲಿಸಿದ ಕ್ವಿಂಟನ್ ಡಿ ಕಾಕ್ 18, ಹಾರ್ಡ್ ಹಿಟ್ಟರ್ ಹೆನ್ರಿಚ್ ಕ್ಲಾಸೆನ್ 17, ಡೇವಿಡ್ ಮಿಲ್ಲರ್ 14 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. 2015ರ ಆವೃತ್ತಿಯ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ 68 ಸಿಕ್ಸರ್ ಬಾರಿಸಿತ್ತು. 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 67 ಸಿಕ್ಸರ್ ಸಿಡಿಸಿತ್ತು.
190 ರನ್ ಗೆಲುವು
ಇಲ್ಲಿನ ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ವಿಶ್ವಕಪ್ನ 32ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಡಿ ಕಾಕ್(114) ಮತ್ತು ಡುಸ್ಸೆನ್(133) ಅವರ ಶತಕದ ನೆರವಿನಿಂದ, ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ಗೆ 357 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 35.3 ಓವರ್ಗಳಲ್ಲಿ 167 ರನ್ಗೆ ಸರ್ವಪತನ ಕಂಡು 190 ರನ್ಗಳ ಹೀನಾಯ ಸೋಲು ಕಂಡಿತು. ಈ ಸೋಲಿನೊಂದಿಗೆ ಕಿವೀಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಆಸೀಸ್ ಮೂರನೇ ಸ್ಥಾನಕ್ಕೇರಿತು.
ಇದನ್ನೂ ಓದಿ NZ vs SA: ಕಿವೀಸ್ ಸೋಲಿನಿಂದ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಭಾರತಕ್ಕೂ ನಷ್ಟ
4 ಶತಕ ದಾಖಲಿಸಿದ ಡಿ ಕಾಕ್
103 ಎಸೆತಗಳಿಂದ ಶತಕ ಪೂರ್ತಿಗೊಳಿಸಿದ ಡಿ ಕಾಕ್ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 4ನೇ ಶತಕ ಬಾರಿಸಿದ ಸಾಧನೆ ಮಾಡಿದರು. ಈ ಶತಕ ಬಾರಿಸುವ ಮೂಲಕ ಡಿ ಕಾಕ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಕುಮಾರ್ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟಿದರು. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ಡಿ ಕಾಕ್ ಕೂಡ 4 ಶತಕ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದಲ್ಲದೆ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ಏಕದಿನ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾದರು. ಡಿ ಕಾಕ್ ಅವರ 21 ಶತಕ ಇದಾಗಿದೆ. 27 ಶತಕ ಬಾರಿಸಿರುವ ಹಾಶಿಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದಾರೆ. 25 ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.