ಮುಂಬಯಿ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಶನಿವಾರ ನಡೆಯಲಿರುವ ಏಷ್ಯಾ ಕಪ್ ಗುಂಪು ಹಂತದ ಹಣಾಹಣಿಗೆ (Asia Cup 2022) ವೇದಿಕೆ ಸಜ್ಜುಗೊಂಡಿದೆ. ದುಬೈಗೆ ಕಾಲಿಟ್ಟಿರುವ ಇತ್ತಂಡಗಳ ಆಟಗಾರರು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸೇರಿದಂತೆ ಹಿರಿಯ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡುವುದಕ್ಕೆ ರಣ ತಂತ್ರ ರೂಪಿಸುತ್ತಿದ್ದಾರೆ. ಏತನ್ಮಧ್ಯೆ, ಈ ಬಾರಿ ಗೆಲ್ಲುವುದು ಭಾರತ ತಂಡವೇ ಎಂದು ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ. ಅದಕ್ಕವರು ಕಾರಣವನ್ನೂ ಕೊಟ್ಟಿದ್ದಾರೆ.
ಭಾರತ ತಂಡ ಟಿ೨೦ ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ವಿಕೆಟ್ ಪತನಗೊಂಡ ಹೊರತಾಗಿಯೂ ರನ್ ಗಳಿಕೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಪಾಕಿಸ್ತಾನ ತಂಡಕ್ಕೆ ಈ ಅನುಕೂಲ ಇಲ್ಲ. ಹೀಗಾಗಿ ಗೆಲುವು ಭಾರತ ತಂಡಕ್ಕೆ ಎಂದಿದ್ದಾರೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸಾಬಾ ಕರಿಮ್.
ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದರೆ ಮುನ್ನುಗ್ಗಿ ಬಾರಿಸಿ ದೊಡ್ಡ ಮೊತ್ತ ಪೇರಿಸುತ್ತಿದೆ. ಹೀಗಾಗಿ ದುಬೈನ ಸಪಾಟು ಪಿಚ್‌ನಲ್ಲಿ ಭಾರತಕ್ಕೆ ದೊಡ್ಡ ಮೊತ್ತ ಪೇರಿಸುವುದು ದೊಡ್ಡ ಸಮಸ್ಯೆಯಾಗುವುದಿಲ್ಲ. ಎಂಥದ್ದೇ ಗುರಿಯನ್ನು ಭೇದಿಸುವ ಅವಕಾಶಗಳು ಇವೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಆರಂಭಿಕ ಬ್ಯಾಟರ್ ಆಗಿ ಉತ್ತಮ ಲಯದಲ್ಲಿದ್ದಾರೆ. ನಿರಂತರವಾಗಿ ರನ್ ಗಳಿಸುತ್ತಾ ಸಾಗುತ್ತಾರೆ. ಆದರೆ ಉಳಿದವರ ಅಷ್ಟೊಂದು ಪರಿಣಾಮಕಾರಿ ಬ್ಯಾಟಿಂಗ್ ಮಾಡುವುದಿಲ್ಲ. ಇದು ಕೂಡ ಭಾರತಕ್ಕೆ ಅನುಕೂಲಕರ ಸಂಗತಿ ಎಂದು ಹೇಳಿದರು.
“ಭಾರತದ ಬ್ಯಾಟಿಂಗ್ ಅಟ್ಯಾಕಿಂಗ್ ಮೂಡ್‌ನಲ್ಲಿದೆ. ಒಂದು ವೇಳೆ ವಿರಾಟ್ ಕೊಹ್ಲಿಯೂ ಅದೇ ಮಾದರಿಯ ಬ್ಯಾಟಿಂಗ್ ಮಾಡಿದರೆ ಇನ್ನಷ್ಟು ಅನುಕೂಲ,” ಎಂದು ಹೇಳಿದರು.
ಇದನ್ನೂ ಓದಿ | ಕ್ರಿಕೆಟ್ ಕ್ಷೇತ್ರದಲ್ಲಿ BCCI ಮೀರಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ