ಮುಂಬಯಿ: ವಿಶ್ವದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರ ಹೆಸರನ್ನು ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಗ್ರೌಂಡ್ನ ಆಟಗಾರರ ಪ್ರವೇಶ ದ್ವಾರಕ್ಕೆ ಇಡಲಾಗಿದೆ. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದ್ದು, ಈ ಇಬ್ಬರು ಆಟಗಾರರು ಡೊನಾಲ್ಡ್ ಬ್ರಾಡ್ಮನ್ ಹಾಗೂ ಅಲನ್ ಡೇವಿಡ್ಸನ್ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಡಲಾಗಿದೆ. ಅದರ ಜತೆಗೆ ವೆಸ್ಟ್ಇಂಡೀಸ್ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಅವರ ಈ ಮೈದಾನದ 277 ರನ್ಗಳ ಇನಿಂಗ್ಸ್ಗೂ 30 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಹೆಸರನ್ನು ಗೇಟ್ಗೆ ಇಡಲಾಗಿದೆ.
ವಿಶ್ವ ವಿಖ್ಯಾತ ಸಿಡ್ನಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪ್ರವಾಸಿ ತಂಡ ಹಾಗೂ ಆತಿಥೇಯ ತಂಡದ ಪ್ರವೇಶಕ್ಕೆ ಪ್ರತ್ಯೇಕ ಗೇಟ್ಗಳಿವೆ. ಇನ್ನು ಮುಂದೆ ಅಲ್ಲಿ ಟೆಸ್ಟ್ ಪಂದ್ಯಗಳು ನಡೆದಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಡಾನ್ ಬ್ರಾಡ್ಮನ್ ಗೇಟ್ನಿಂದ ಮೈದಾನಕ್ಕೆ ಪ್ರವೇಶ ಪಡೆದರೆ, ಪ್ರವಾಸಿ ತಂಡದ ಆಟಗಾರರು ಸಚಿನ್-ಲಾರಾ ಗೇಟ್ನಿಂದ ಎಂಟ್ರಿಯಾಗಲಿದ್ದಾರೆ.
ಸಚಿನ್ ತೆಂಡೂಲ್ಕರ್ಗೆ ವಿದೇಶಿ ಪಿಚ್ಗಳ ಸಾಲಿನಲ್ಲಿ ಸಿಡ್ನಿ ಅತ್ಯಂತ ಇಷ್ಟ. ಅಲ್ಲಿ ಅವರು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 157 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.
ಎಸ್ಸಿಜಿಯಲ್ಲ ನಾನು ಉತ್ತಮ ನೆನಪುಗಳನ್ನು ಹೊಂದಿದ್ದೇನೆ. 1991-92ರಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ಬಳಿಕದಿಂದಲೂ ವಿದೇಶದಲ್ಲಿ ನನ್ನ ಇಷ್ಟದ ಗ್ರೌಂಡ್ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಲಾರಾ ಅವರೂ ಇದು ನನಗೆ ದೊರೆತ ಗೌರವ ಎಂದು ಹೇಳಿದ್ದಾರೆ.
ಈ ಗ್ರೌಂಡ್ನಲ್ಲಿ ಹಲವು ವಿಶೇಷ ಸ್ಮರಣೆಗಳನ್ನು ಹೊಂದಿದ್ದೇನೆ. ನಾನು ಮತ್ತು ನನ್ನ ಕುಟುಂಬ ಇಲ್ಲಿ ಬಂದಾಗಲೆಲ್ಲ ಹೆಚ್ಚು ಖುಷಿ ಪಡುತ್ತಿದ್ದೆವು ಎಂದು ಲಾರಾ ಅವರೂ ಹೇಳಿದ್ದಾರೆ.
ಇದನ್ನೂ ಓದಿ : Sachin@50: ಅಭಿಮಾನಿಯ ಟ್ಯಾಟುಗೆ ಫುಲ್ ಮಾರ್ಕ್ಸ್ ನೀಡಿದ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹ್ಯಾಲೆ ಪ್ರತಿಕ್ರಿಯಿಸಿ. ಸೂಕ್ತ ಕಾಲಕ್ಕೆ ನೀಡಿರುವ ಗೌರವ ಇದಾಗಿದೆ ಎಂದು ಹೇಳಿದ್ದಾರೆ.
ಈ ಇಬ್ಬರು ಕ್ರಿಕೆಟ್ ಆಟಗಾರರು ಎಲ್ಲ ದೇಶದ ಕ್ರಿಕೆಟಿಗರಿಗೆ ಪ್ರೇರಣೆಯಾಗಿದ್ದಾರೆ. ಭವಿಷ್ಯದ ಕ್ರಿಕೆಟಿಗರಿಗೆಲ್ಲರಿಗೂ ಅವರಿಬ್ಬರು ಮಾದರಿಯಾಗಿದ್ದಾರೆ ಎಂದು ನಿಕ್ ಹ್ಯಾಲೆ ಹೇಳಿದ್ದಾರೆ.