ಮುಂಬಯಿ: ಸಚಿನ್ ತೆಂಡೂಲ್ಕರ್ (Sachin Tendulkar) ಬದ್ಧತೆ ಹಾಗೂ ಆದರ್ಶ ಬದುಕಿನ ಬಗ್ಗೆ ಹೆಚ್ಚಿನ ವಿವರಣೆಗಳು ಬೇಕಾಗಿಲ್ಲ. ಕ್ರಿಕೆಟ್ ಆಡುವ ಕಾಲದಿಂದ ಹಿಡಿದು ನಿವೃತ್ತಿಯ ನಂತರದ ಬದುಕಿನಲ್ಲೂ ಅವರು ಎಲ್ಲರಿಗೂ ಆದರ್ಶ. ಸಾಧಕರೊಬ್ಬರು ಯಾವ ರೀತಿ ಇರಬೇಕು ಎಂಬುದಕ್ಕೆ ಅವರು ಅತ್ಯುತ್ತಮ ನಿರ್ದಶನ. ಈ ರೀತಿಯಲ್ಲಿ ಎಲ್ಲ ವಿಚಾರಗಳಲ್ಲೂ ಮೇಲ್ಪಂಕ್ತಿಯಲ್ಲಿ ನಿಲ್ಲುವ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಪ್ಪನಿಗೆ ಒಂದು ಮಾತು ಕೊಟ್ಟಿದ್ದರು. ಅದನ್ನು ಅವರು ಜೀವನ ಪೂರ್ತಿ ಪಾಲಿಸಿಕೊಂಡು ಬಂದಿದ್ದಾರೆ. ಮೇ 30ರಂದು ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ತಮ್ಮ ತಂದೆ ದಿ. ರಮೇಶ್ ತೆಂಡೂಲ್ಕರ್ ಅವರಿಗೆ ನೀಡಿದ್ದ ವಾಗ್ದಾನವನ್ನು ನೆನಪಿಸಿಕೊಂಡಿದ್ದಾರೆ. ಅದರಿಂದ ತಮ್ಮ ಜೀವನದ ಮೇಲೆ ಆಗಿರುವ ಸಕಾರಾತ್ಮಕ ಪ್ರಭಾವದ ಬಗ್ಗೆ ಮಾತನಾಡಿದ್ದಾರೆ. ನಾನು ಎಲ್ಲರಿಗೂ ರೋಲ್ ಮಾಡೆಲ್ ಆಗಿರಬೇಕು ಎಂದು ನನ್ನ ತಂದೆ ಭಯಸಿದ್ದರು. ಅದಕ್ಕಾಗಿ ಎಂದಿಗೂ ಮದ್ಯಪಾನ ಅಥವಾ ತಂಬಾಕು ಉತ್ಪನ್ನಗಳಿಗೆ ಉತ್ತೇಜನ ನೀಡುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ ಎಂದ ಹೇಳಿದ್ದಾರೆ.
ಮೇ 31 ವಿಶ್ವ ತಂಬಾಕು ವಿರೋಧಿ ದಿನ. ಈ ಸಂಬಂಧ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಂಡೂಲ್ಕರ್, ತಮ್ಮ ತಂದೆ ತಂಬಾಕು ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ಹೇಳಿದ್ದರು. ಆ ಮಾತನ್ನೂ ಪಾಲಿಸಿದ್ದೇನೆ. ಹೀಗಾಗಿ ಕೋಟ್ಯಂತರ ರೂಪಾಯಿಗಳ ಜಾಹೀರಾತು ಅವಕಾಶ ಸಿಕ್ಕರೂ ತಿರಸ್ಕರಿಸಿದ್ದೆ ಎಂಬುದಾಗಿ ಬಹಿರಂಗಪಡಿಸಿದ್ದಾರೆ.
ನಾನು ಭಾರತಕ್ಕಾಗಿ ಆಡಲು ಪ್ರಾರಂಭಿಸಿದಾಗ, ನಾನು ಶಿಕ್ಷಣ ವ್ಯವಸ್ಥೆಯಿಂದ ಹೊರಬಂದಿದ್ದೆ. ಈ ವೇಳೆ ಅನೇಕ ಜಾಹೀರಾತು ಪ್ರಸ್ತಾಪಗಳನ್ನು ಪಡೆಯಲು ಪ್ರಾರಂಭಿಸಿದ್ದೆ. ಆದರೆ ನನ್ನ ತಂದೆ ಎಂದಿಗೂ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಬಾರದು ಎಂದು ಹೇಳಿದ್ದರು. ನನಗೆ ಅನೇಕ ಆಫರ್ಗಳು ಬಂದಿದ್ದರೂ ಒಂದನ್ನೂ ಸ್ವೀಕರಿಸಿರಲಿಲ್ಲ ಎಂದು ಅವರು ಸ್ಟೇಟ್ಮನ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ನನ್ನ ವೃತ್ತಿಜೀವನದ ಮೊದಲ ಎರಡು ವರ್ಷಗಳಲ್ಲಿ ಕೆಲವು ಸಹೋದ್ಯೋಗಿಗಳು ಸಿಗರೇಟ್ ಬ್ರಾಂಡ್ಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ನಾನು ಎಂದಿಗೂ ನನ್ನ ಬ್ಯಾಟ್ನಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರದ ಸ್ಟಿಕ್ಕರ್ ಹಾಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023: ಶುಭಮನ್ ಗಿಲ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಚಿನ್ ಹೇಳಿದ ಮಾತುಗಳೇನು?
ಇದು ನಾನು ನನ್ನ ತಂದೆಗೆ ನೀಡಿದ ಭರವಸೆ. ನಾನು ರೋಲ್ ಮಾಡೆಲ್ ಆಗಿರುವಾಗ ನಾನು ಮಾಡುವ ಕೆಲಸವನ್ನು ಬಹಳಷ್ಟು ಜನರು ಅನುಸರಿಸುತ್ತಾರೆ ಎಂದು ನನ್ನ ತಂದೆ ನೆನಪಿಸಿದ್ದರು. ಅದಕ್ಕಾಗಿಯೇ ನಾನು ಎಂದಿಗೂ ತಂಬಾಕು ಉತ್ಪನ್ನಗಳು ಅಥವಾ ಮದ್ಯಪಾನಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. 1990ರ ದಶಕದಲ್ಲಿ ನನ್ನ ಬ್ಯಾಟ್ ಮೇಲೆ ಸ್ಟಿಕ್ಕರ್ ಇರಲಿಲ್ಲ,. ಅದಕ್ಕೆ ನಾನು ಆಫರ್ ನಿರಾಕರಿಸಿದ್ದೇ ಕಾರಣ. ಈ ವೇಳೆ ತಂಡದ ಉಳಿದವರೆಲ್ಲರೂ ವಿಲ್ಸ್ ಮತ್ತು ಫೋರ್ ಸ್ಕ್ವೇರ್ ಎಂಬ ಎರಡು ಬ್ರಾಂಡ್ಗಳ ಸ್ಟಿಕ್ಕರ್ ಇಟ್ಟುಕೊಂಡಿದ್ದರು ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಈ ಬ್ರಾಂಡ್ಗಳನ್ನು ಅನುಮೋದಿಸದೇ ನಾನು ನನ್ನ ತಂದೆಗೆ ನೀಡಿದ ಭರವಸೆಯನ್ನು ಕಾಪಾಡಿಕೊಂಡೆ ನನ್ನ ಬ್ಯಾಟ್ ಮೇಲೆ ಸ್ಟಿಕ್ಕರ್ ಹಾಕಿಕೊಳ್ಳುವ ಅನೇಕ ಪ್ರಸ್ತಾಪಗಳನ್ನು ಪಡೆದಿದ್ದೇನೆ. ಆದರೆನ ನಾನು ಅವುಗಳನ್ನು ಉತ್ತೇಜಿಸಲು ಬಯಸಲಿಲ್ಲ. ಎಂದು ಸಚಿನ್ ಹೇಳಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆಂಬ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವದಾದ್ಯಂತದ ಒಂದು ತಲೆಮಾರಿನ ಕ್ರಿಕೆಟಿಗರು ಆರಾಧಿಸುತ್ತಾರೆ. 24 ವರ್ಷಗಳ ವೃತ್ತಿಜೀವನದಲ್ಲಿ, ಸಚಿನ್ ಭಾರತ ತಂಡದ ಪರ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ವಿಶ್ವ ದಾಖಲೆಯ 15921 (ಟೆಸ್ಟ್) ಮತ್ತು 18426 (ಏಕ ದಿನ) ರನ್ಗಳನ್ನು ಬಾರಿಸಿದ್ದಾರೆ. ಟೆಸ್ಟ್ನಲ್ಲಿ 51 ಮತ್ತು ಏಕದಿನದಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ.