Site icon Vistara News

Wimbledon 2023: ಅಲ್ಕರಾಜ್‌ ಆಟಕ್ಕೆ ‘ಕ್ರಿಕೆಟ್‌ ದೇವರು’ ಫಿದಾ; ಟೆನಿಸ್‌ನ ಈ ಲೆಜೆಂಡ್ ಜತೆಗೂ ಹೋಲಿಕೆ

Sachin Tendulkar On Carlos Alcaraz

Sachin Tendulkar compares Carlos Alcaraz to Roger Federer after Wimbledon triumph

ಮುಂಬೈ: ಟೆನಿಸ್‌ ಜಗತ್ತಿಗೆ ಹೊಸ ಸ್ಟಾರ್‌ ಸಿಕ್ಕಿದ್ದಾನೆ. ಕೇವಲ 20 ವರ್ಷದ, ಸರಿಯಾಗಿ ಮೀಸೆ, ಗಡ್ಡವೂ ಮೂಡದ, ಆದರೆ, ಸರ್ಬಿಯಾದ ನೊವಾಕ್‌ ಜೋಕೊವಿಕ್‌ ಅವರಂತಹ ದಿಗ್ಗಜನನ್ನೇ ಮಣಿಸಿ 2023ರ ವಿಂಬಲ್ಡನ್‌ನಲ್ಲಿ ಚಾಂಪಿಯನ್‌‌ (Wimbledon 2023) ಆಗುವ ಮೂಲಕ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಈಗ ಜಗತ್ತಿನ ಮನೆಮಾತಾಗಿದ್ದಾರೆ. ವಿಶ್ವದ ನಂಬರ್‌ 1 ಶ್ರೇಯಾಂಕಿತರೂ ಆಗಿರುವ ಕಾರ್ಲೋಸ್‌ ಅಲ್ಕರಾಜ್‌ ಅವರಿಗೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರೂ ಫಿದಾ ಆಗಿದ್ದಾರೆ. ಅಲ್ಲದೆ, ಟೆನಿಸ್‌ ಲೋಕದ ಮತ್ತೊಬ್ಬ ದಂತಕತೆ, 20 ಬಾರಿ ಗ್ರ್ಯಾನ್‌ ಸ್ಲಾಮ್ ಗೆದ್ದಿರುವ ರೋಜರ್‌ ಫೆಡರರ್‌ ಜತೆ ಕಾರ್ಲೋಸ್‌ ಅಲ್ಕರಾಜ್‌ ಅವರನ್ನು ಹೋಲಿಸಿದ್ದಾರೆ.

“ಎಂಥ ಮನಮೋಹಕ ಮ್ಯಾಚ್‌ ಇದು. ಇಬ್ಬರೂ ಅಥ್ಲೀಟ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ನಾವೂ ಟೆನಿಸ್‌ ಪ್ರಪಂಚದ ಸೂಪರ್‌ ಸ್ಟಾರ್‌ ಒಬ್ಬ ಉದಯಿಸುತ್ತಿರುವುದನ್ನು ನೋಡುತ್ತಿದ್ದೇವೆ. ರೋಜರ್‌ ಫೆಡರರ್‌ ಅವರ ಏಳಿಗೆಯನ್ನು ಹೇಗೆ ನೋಡಿದನೋ, ಮುಂದಿನ 10-12 ವರ್ಷದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಅವರ ಅದ್ಭುತ ಆಟ, ಅವರ ವೃತ್ತಿಜೀವನದ ಏಳಿಗೆಯನ್ನು ನೋಡಬಯಸುತ್ತೇನೆ. ಅಭಿನಂದನೆಗಳು ಕಾರ್ಲೋಸ್‌ ಅಲ್ಕರಾಜ್” ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ. ‌

ಸಚಿನ್‌ ತೆಂಡೂಲ್ಕರ್‌ ಟ್ವೀಟ್

ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ ಲಂಡನ್‌ನಲ್ಲಿ ನಡೆದ 2023ರ ವಿಂಬಲ್ಡನ್‌ ಫೈನಲ್‌ನಲ್ಲಿ ನೊವಾಕ್‌ ಜೋಕೊವಿಕ್‌ ಅವರನ್ನು 1-6, 7-6 (8-6), 6-1, 3-6, 6-4 ಅಂತರದಿಂದ ಮಣಿಸಿ, ಎರಡನೇ ಬಾರಿ ಗ್ರ್ಯಾನ್‌ ಸ್ಲಾಮ್‌ ಗೆದ್ದ ಸಾಧನೆ ಮಾಡಿದರು. ವಿಂಬಲ್ಡನ್‌ಗೆ ಕಾರ್ಲೋಸ್‌ ಅಲ್ಕರಾಜ್‌ ಮುತ್ತಿಡುತ್ತಲೇ ಕ್ರೀಡಾ ಜಗತ್ತೇ ಅವರನ್ನು ಕೊಂಡಾಡಿದೆ. ಟೆನಿಸ್‌ ಜಗತ್ತಿಗೆ ಹೊಸ ಸ್ಟಾರ್‌ ಸಿಕ್ಕಿದ್ದಾನೆ ಎಂದೇ ಎಲ್ಲರೂ ಹೇಳುತ್ತಾರೆ.

ಇದನ್ನೂ ಓದಿ: Wimbledon 2023: ಗ್ರ್ಯಾನ್‌ ಸ್ಲಾಂ ಸರದಾರ ಜೊಕೋವಿಕ್‌ ಮಣಿಸಿ ವಿಂಬಲ್ಡನ್ ಗೆದ್ದ ಬಿಸಿರಕ್ತದ ತರುಣ ಅಲ್ಕರಾಜ್‌

ಜೋಕೊಗೆ ತಿವಿದ ಆರ್‌. ಅಶ್ವಿನ್‌

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತದ ಸ್ಪಿನ್ನರ್‌ ಆರ್‌.ಅಶ್ವಿನ್‌ ಅವರು ಟ್ವೀಟ್‌ ಮಾಡುವ ಮೂಲಕ ಜೋಕೊವಿಕ್‌ ಅವರಿಗೆ ತಿವಿದಿದ್ದಾರೆ. “Time Violation” ಎಂದಷ್ಟೇ ಟ್ವೀಟ್‌ ಮಾಡುವ ಮೂಲಕ ಜೋಕೊವಿಕ್‌ಗೆ ಅಶ್ವಿನ್‌ ಟಾಂಗ್‌ ಕೊಟ್ಟಿದ್ದಾರೆ.

ಆಟದ ವೇಳೆ ‘ಸರ್ವ್’‌ ಮಾಡಲು ಜೋಕೊವಿಕ್‌ 33 ಸೆಕೆಂಡ್‌ ತೆಗೆದುಕೊಂಡರೆ, ಅಲ್ಕರಾಜ್‌ 27 ಸೆಕೆಂಡ್‌ ತೆಗೆದುಕೊಂಡರು. ಸಮಯದ ಉಲ್ಲಂಘನೆ ಹಿನ್ನೆಲೆಯಲ್ಲಿ ಕೊನೆಗೆ ಜೋಕೊವಿಕ್‌ ಅವರಿಗೆ ಪೆನಾಲ್ಟಿ ಶಿಕ್ಷೆಯೂ ಆಯಿತು. ಇದನ್ನೇ ಕೇಂದ್ರೀಕರಿಸಿ ಆರ್‌. ಅಶ್ವಿನ್‌ ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿದೆ.

Exit mobile version