Site icon Vistara News

11 ಇನಿಂಗ್ಸ್​ ಬಳಿಕ ಟೆಸ್ಟ್ ಶತಕ ಬಾರಿಸಿದ ಗಿಲ್​ಗೆ ಅಭಿನಂದಿಸಿದ ಸಚಿನ್​ ತೆಂಡೂಲ್ಕರ್​

Shubman Gill scored his third Test hundred

ವಿಶಾಖಪಟ್ಟಣಂ: ಕಳೆದ 11 ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡು ಭಾರೀ ಟೀಕೆಗೆ ಗುರಿಯಾಗಿದ್ದ ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಕೊನೆಗೂ ಶತಕ ಬಾರಿಸುವ ಮೂಲಕ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದಾರೆ. ಜತೆಗೆ ಎಲ್ಲ ಟೀಕೆಗೂ ಈ ಶತಕದ ಮೂಲಕ ಉತ್ತರ ನೀಡಿದ್ದಾರೆ.

ಕಳೆದ 11 ಇನಿಂಗ್ಸ್​ನಲ್ಲಿ ಗಿಲ್​ 13, 8, 6, 10, 29*, 2, 26, 36, 10, 23, 0. ರನ್​ ಬಾರಿಸಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಇದೀಗ ಶತಕ ಬಾರಿಸಿ ಮಿಂಚಿದ್ದಾರೆ. ಶುಭಮನ್​ ಗಿಲ್​ ಶತಕಕ್ಕೆ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(Sachin Tendulkar) ಅವರು ಟ್ವೀಟ್​ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಶುಭಮನ್​ ಗಿಲ್​ ಅವರ ಶತಕದ ಫೋಟೊ ಹಂಚಿಕೊಂಡು, “ಶುಭಮನ್ ಗಿಲ್ ಅವರ ಈ ಇನ್ನಿಂಗ್ಸ್ ಕೌಶಲ್ಯದಿಂದ ತುಂಬಿತ್ತು! ಉತ್ತಮ ಸಮಯ. ಶತತಕ್ಕೆ ಅಭಿನಂದನೆಗಳು!” ಎಂದು ಸಚಿನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್(India vs England 2nd Test)​ ಪಂದ್ಯದ ಮೂರನೇ ದಿನದಾಟದಲ್ಲಿ ಶುಭಮನ್​ ಗಿಲ್​ ಅವರು 147 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿದರು. ಗಿಲ್​ ಅವರ ಈ ಶತಕದ ಆಟದ ನೆರವಿನಿಂದ ಭಾರತ ದ್ವಿತೀಯ ಇನಿಂಗ್ಸ್​ನಲ್ಲಿ ಉತ್ತಮ ರನ್​ ಗಳಿಸಲು ಸಾಧ್ಯವಾಯಿತು. ಆರಂಭಿಕರಾದ ರೋಹಿತ್​ ಮತ್ತು ಜೈಸ್ವಾಲ್​ ಬೆಳಗ್ಗಿನ ಆಟದ ವೇಳೆಯೇ ವಿಕೆಟ್​ ಕಳೆದುಕೊಂಡರು.

ಇದನ್ನೂ ಓದಿ IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್​ ಶರ್ಮ

ಗಿಲ್​ ಬಳಿಕ ತಂಡಕ್ಕೆ ನೆರವಾದ ಆಟಗಾರನೆಂದರೆ ಆಲ್​ರೌಂಡರ್​ ಅಕ್ಷರ್​ ಪಟೇಲ್​ ಮಾತ್ರ. 84 ಎಸೆತ ಎದುರಿಸಿದ ಅಕ್ಷರ್​ 45 ರನ್​ ಬಾರಿಸಿ ಕೇವಲ 5 ರನ್​ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಸದ್ಯ ಭಾರತ 400 ರನ್​ಗಳ ಲೀಡ್​ ಸಾಧಿಸುವ ಸನಿಹದಲ್ಲಿದೆ. ಇನ್ನು 2 ದಿನಗಳ ಆಟ ಬಾಕಿ ಇದ್ದು, ಬೌಲಿಂಗ್​ನಲ್ಲಿ ಉತ್ತಮ ಹಿಡಿತ ಸಾಧಿಸಿದರೆ ಪಂದ್ಯ ಗೆಲ್ಲಬಹುದು.

ಶುಭಮನ್​ ಗಿಲ್​ ಅವರು ಆರಂಭಿಕ ಬ್ಯಾಟರ್​ ಆಗಿದ್ದಾರೆ. ಅವರು ಆರಂಭಿಕನಾಗಿ ಆಡಿದ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆದರೆ ಪೂಜಾರ ತಂಡದಿಂದ ಹೊರ ಬಿದ್ದ ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಈ ಕ್ರಮಾಂಕಕ್ಕೆ ಬೇಗನೇ ಒಗ್ಗಿಕೊಳ್ಳಲು ಕಷ್ಟವಾದ ಕಾರಣದಿಂದ ಅವರು ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಿರಲೂಬಹುದು. ಇದೀಗ ಈ ಕ್ರಮಾಂಕಕ್ಕೆ ಸೆಟ್​ ಆದಂತಿದೆ. ಇದಕ್ಕೆ ಈ ಶತಕವೇ ಉತ್ತರ.

Exit mobile version