Site icon Vistara News

ʼಇದು ಸಾಮಾನ್ಯ ಫುಟ್‌ವರ್ಕ್‌ ಅಲ್ಲ, ಗ್ರೇಟ್‌ ಫುಟ್‌ವರ್ಕ್‌ʼ; ಮ್ಯಾಕ್ಸಿ ಆಟಕ್ಕೆ ಮನಸೋತ ಸಚಿನ್‌

sachin tendulkar and maxwell

ಮುಂಬಯಿ: ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯದ ಮಧ್ಯೆಯೂ ಕೆಚ್ಚೆದೆಯ ಬ್ಯಾಟಿಂಗ್‌ ನಡೆಸಿ ಅಜೇಯ ದ್ವಿಶತಕದ ನೆರವಿನಿಂದ ಆಸೀಸ್‌ಗೆ ಸ್ಮರಣೀಯ ಗೆಲುವು ತಂದು ಕೊಟ್ಟ ಗ್ಲೆನ್‌ ಮ್ಯಾಕ್ಸ್‌ವೆಲ್‌(Glenn Maxwell) ಸಾಹಸವನ್ನು ಸಚಿನ್‌ ತೆಂಡೂಲ್ಕರ್‌(Sachin Tendulkar) ಕೊಂಡಾಡಿದ್ದಾರೆ. ಇದು ಸಾಮಾನ್ಯ ಫುಟ್‌ವರ್ಕ್‌ ಅಲ್ಲ, ಗ್ರೇಟ್‌ ಫುಟ್‌ವರ್ಕ್‌(Great Footwork) ಎಂದಿದ್ದಾರೆ.

“ಜೀವನ ಮತ್ತು ಕ್ರಿಕೆಟ್ ಅನೇಕ ಸಮಾನಾಂತರಗಳನ್ನು ಹೊಂದಿದೆ. ಕೆಲವೊಮ್ಮೆ, ಒಂದು ಸ್ಪ್ರಿಂಗ್‌ನಂತೆ, ಯಾವುದು ನಿಮ್ಮನ್ನು ಹಿಂದಕ್ಕೆ ತಳ್ಳುತ್ತದೋ ಅದುವೇ ಮತ್ತೆ ನಿಮ್ಮನ್ನು ಮುಂದಕ್ಕೆ ತಳ್ಳುತ್ತದೆ. ಮ್ಯಾಕ್ಸಿ ವಿಚಾರದಲ್ಲಿಯೂ ಇದೇ ಸಂಭವಿಸಿದೆ” ಎಂದು ಸಚಿನ್‌ ಹೇಳಿದ್ದಾರೆ.

ಗ್ರೇಟ್‌ ಫುಟ್‌ವರ್ಕ್‌

“ನಿನ್ನೆಯ ಪಂದ್ಯದ ವೇಳೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಕಾಲಿನ ಸೆಳೆತವು ಅವರ ಓಟವನ್ನು ನಿರ್ಬಂಧಿಸಿತು. ಹೀಗಾಗಿ ಅವರು ಕ್ರೀಸ್‌ನಲ್ಲಿ ಉಳಿಯಬೇಕಾಗಿತ್ತು. ಆದರೆ ಅವರ ಆಟವನ್ನು ನಿರ್ಬಂಧಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಚೆಂಡನ್ನು ಹತ್ತಿರದಿಂದ ವೀಕ್ಷಿಸಿದ ಅವರು ಕೈ ಮತ್ತು ಕಣ್ಣಿಗೆ ಹೆಚ್ಚಿನ ಕೆಲಸ ನೀಡಿದರು. ಆಟದ ವಿವಿಧ ಸ್ವರೂಪಗಳಲ್ಲಿ ವಿಭಿನ್ನ ಕಾಲ್ಚಳಕ ಅಗತ್ಯವಿರುತ್ತದೆ. ಆದರೆ ಮ್ಯಾಕ್ಸ್‌ವೆಲ್‌ ಅವರು ಒಂದು ಚೂರು ಕಾಲಿನ ಬಲವನ್ನು ಉಪಯೋಗಿಸದೆ ಬ್ಯಾಟಿಂಗ್‌ ನಡೆಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಅವರ ಈ ಸಾಹಸಕ್ಕೆ ಸಲಾಂ ಹೇಳಲೇ ಬೇಕು. ಇದು ಸಾಮಾನ್ಯ ಫುಟ್‌ವರ್ಕ್‌ ಅಲ್ಲ ಗ್ರೇಟ್‌ ಫುಟ್‌ವರ್ಕ್‌” ಎಂದು ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಸಚಿನ್‌ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ 49 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್​ಎಸ್​ ಮನವಿ ಎದುರಿಸಿದ ಗ್ಲೆನ್​ ಮ್ಯಾಕ್ಸ್​ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ದ್ವಿಶತಕ(201*) ಬಾರಿಸಿ ಗೆಲುವು ತಂದುಕೊಟ್ಟರು.

ಇದನ್ನೂ ಓದಿ ಮ್ಯಾಕ್ಸ್​ವೆಲ್​ ಜಾಗದಲ್ಲಿ ಕೊಹ್ಲಿ ಇರುತ್ತಿದ್ದರೆ ಹೀಗೆ ಮಾಡುತ್ತಿದ್ದರು; ಗಂಭೀರ್​ ಕೊಂಕು ಮಾತು

ನೂರ್ ಅಹಮದ್​ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್​ಬಿಡಬ್ಲ್ಯು ಔಟ್​ ವಿರುದ್ದ ಡಿಆರ್​ಎಸ್​ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್​ ಉರ್ ರಹಮಾನ್ ಅವರು ಮ್ಯಾಕ್ಸ್​ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್​ವೆಲ್​ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್​ ಕಮಿನ್ಸ್​ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.

ಇದನ್ನೂ ಓದಿ ‘ಇದು ನಿಮ್ಮಿಂದ ಮಾತ್ರ ಸಾಧ್ಯ’; ಮ್ಯಾಕ್ಸ್​ವೆಲ್​ಗೆ ಕಿಂಗ್​ ಕೊಹ್ಲಿಯಿಂದ ಮೆಚ್ಚುಗೆ

ಗಾಯದ ಮಧ್ಯೆಯೂ ಹೋರಾಟ

ಮ್ಯಾಕ್ಸ್​ವೆಲ್​ ಶತಕ ಬಾರಿಸಿದ ತಕ್ಷಣ ಬೆನ್ನು ನೋವಿಗೆ ಒಳಗಾದರು. ಬಳಿಕ ಅವರು ಅದಕ್ಕೆ ಮೈದಾನದಲ್ಲೇ ಫಿಸಿಯೊಗಳ ಮೂಲಕ ಆರೈಕೆ ಮಾಡಿಸಿಕೊಂಡರು. ಬಳಿಕ ಅವರು ಕಾಲು ನೋವಿಗೆ ಒಳಗಾದರು. ಪದೇ ಪದೇ ನೋವಿಗೆ ಒಳಗಾಗಿ ಮೈದಾನದಲ್ಲಿ ರನ್​ಗಾಗಿ ಓಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಒಳಗಾದರು. ಮುಂಬಯಿಯ ಬಿಸಿಲಿನಲ್ಲಿ ಆಡಿದ್ದ ಅವರಿಗೆ ಬ್ಯಾಟಿಂಗ್​ನ ಕೊನೇ ಹಂತದಲ್ಲಿ ನಡೆಯಲೂ ಸಾಧ್ಯವಾಗಲಿಲ್ಲ. ಆದರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದರು. ಬರೇ ಫೋರ್, ಸಿಕ್ಸರ್​ಗಳ ಮೂಲಕ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು.

Exit mobile version