ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರು, ಧ್ವನಿ ಮತ್ತು ಫೋಟೊಗಳನ್ನು ಅಕ್ರಮವಾಗಿ ಬಳಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಚಿನ್ ಅವರ ಅನುಮತಿಯಿಲ್ಲದೆ ಅವರ ಚಿತ್ರಗಳು, ಮತ್ತು ಅವರ ಧ್ವನಿಯನ್ನು ಬಳಸಿಕೊಂಡು ಔಷಧೀಯ ಉತ್ಪನ್ನಗಳ ಪ್ರಚಾರ ಮಾಡಿದ ಅಪರಿಚಿತ ವ್ಯಕ್ತಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ವಂಚಿಸಿದ ಅಪರಿಚಿತರ ವಿರುದ್ಧ ಸಚಿನ್ ಅವರು ದೂರು ದಾಖಲಿಸಿದ್ದರು. ಇದೀಗ ಈ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತೆಂಡೂಲ್ಕರ್ ಅವರ ಸಹಾಯಕರೊಬ್ಬರು ಪಶ್ಚಿಮ ವಲಯದ ಸೈಬರ್ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ. ತೆಂಡೂಲ್ಕರ್ ಪರವಾಗಿ ದೂರು ದಾಖಲಿಸಿದ ವ್ಯಕ್ತಿಯ ಪ್ರಕಾರ, ಆನ್‌ಲೈನ್ ಡ್ರಗ್ ಕಂಪನಿಯೊಂದು ಸಚಿನ್ ಹೆಸರನ್ನು ಬಳಸಿಕೊಂಡು ಜಾಹೀರಾತುಗಳನ್ನು ಮಾಡುತ್ತಿದೆ, ಆದರೆ ಸಚಿನ್ ಅವರು ಈ ಕಂಪೆನಿ ಜತೆ ಯಾವುದೇ ಒಪ್ಪಂದ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ IPL 2023: ಸ್ಟೇಡಿಯಂನಲ್ಲಿ ಮೊಬೈಲ್ ಮೂಲಕ ಪಂದ್ಯ ವೀಕ್ಷಿಸಿದ ಭೂಪ; ವಿಡಿಯೊ ವೈರಲ್
sachinhealth.in ಹೆಸರಿನ ವೆಬ್‌ಸೈಟ್ ತೆಂಡೂಲ್ಕರ್ ಅವರ ಫೋಟೊವನ್ನು ಬಳಸಿಕೊಂಡು ಅನೇಕ ಉತ್ಪನ್ನಗಳನ್ನು ಪ್ರಚಾರ ಮಾಡಿದೆ. ಸಚಿನ್ ಅವರ ಒಪ್ಪಿಗೆ ಇಲ್ಲದೆ ಕಾನೂನುಬಾಹಿರವಾಗಿ ಈ ರೀತಿಯ ಕೃತ್ಯ ಎಸಗಿದ್ದಕ್ಕೆ ಹಿರಿಯ ಕ್ರಿಕೆಟಿಗ ಮುಂಬೈನಲ್ಲಿ ದೂರು ದಾಖಲಿಸಲು ತಮ್ಮ ಸಹಾಯಕರಲ್ಲಿ ಒಬ್ಬರಿಗೆ ಸೂಚಿಸಿದ್ದರು.
ಸದ್ಯ ಅಪರಾಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 465 (ನಕಲಿ) ಮತ್ತು 500 (ಮಾನನಷ್ಟ) ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜತೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.