ಮುಂಬಯಿ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ನ (ICC World Cup 2023) ಜಾಗತಿಕ ರಾಯಭಾರಿಯಾಗಿರುವ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ 4 ತಂಡಗಗಳನ್ನು ಆಯ್ಕೆ ಮಾಡಿದ್ದಾರೆ.
ಐಸಿಸಿಯ ಸಂದರ್ಶನದಲ್ಲಿ ಮಾತನಾಡಿದ ಸಚಿನ್, “ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಕೊಂಡೊಯ್ಯುವಾಗ ಮೈ ರೋಮಾಂಚನಗೊಳ್ಳುತ್ತದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ನನೆಪು ಮತ್ತೆ ಕಣ್ಣ ಮುಂದೆ ಬರುತ್ತದೆ. ಈ ಟ್ರೋಪಿಯನ್ನು ಎತ್ತಿಹಿಡಿಯುವುದೇ ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿದೆ” ಎಂದು ಈ ಬಾರಿ ಸೆಮಿಫೈನಲ್ ಪ್ರವೇಶ ಪಡೆಯುವ ತಂಡವನ್ನು ಹೆಸರಿಸಿದ್ದಾರೆ.
ಭಾರತ ಮೊದಲ ಆಯ್ಕೆ
ಭಾರತ ತಂಡ ಸೆಮಿಫೈನಲ್ ಪ್ರವೇಶ ಪಡೆಯುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಬಾರಿ ತಂಡ ಹೆಚ್ಚು ಸಮತೋಲನವಾಗಿದೆ. ಯುವ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ನನ್ನ ಮೊದಲ ಆಯ್ಕೆ ಭಾರತ ಎಂದು ಹೇಳಿದರು. ದ್ವಿತೀಯ ಆಯ್ಕೆಯ ತಂಡವೆಂದರೆ ಅದು ಆಸ್ಟ್ರೇಲಿಯಾ. ಈ ತಂಡದಲ್ಲಿಯೂ ಅನುಭವಿ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಸೀಸ್ ಕೂಡ ಸೆಮಿಫೈನಲ್ ಪ್ರವೇಶ ಪಡೆಯಲಿದೆ ಎಂದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಈ ಬಾರಿ ಸೆಮಿ ಪ್ರವೇಶ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಬೆನ್ ಸ್ಟೋಕ್ಸ್ ಆಗಮನ ತಂಡಕ್ಕೆ ಹೆಚ್ಚು ಆತ್ಮವಿಶ್ವಾಸ ನೀಡಿದೆ. ನಾಲ್ಕನೇ ತಂಡವಾಗಿ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪ್ರವೇಶ ಪಡೆಯಲಿದೆ ಎಂದು ಸಚಿನ್ ತಮ್ಮ ಆಯ್ಕೆಯ ನಾಲ್ಕು ಸೆಮಿಫೈನಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಸಚಿನ್ ಹೆಸರಿಸಿದ ತಂಡಗಳು ಸೆಮಿಫೈನಲ್ಗೆ ಬರಲಿದೆಯಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ ICC World Cup 2023 : ಹೈದರಾಬಾದ್ ಬಿರಿಯಾನಿ vs ಕರಾಚಿ ಬಿರಿಯಾನಿ; ಕ್ರಿಕೆಟ್ ವೇದಿಕೆಯಲ್ಲಿ ಜೋರು ಚರ್ಚೆ
ಸಚಿನ್‌ಗೆ ಅರ್ಪಣೆ
2011ರ ವಿಶ್ವಕಪ್ ಗೆಲುವನ್ನು ಆಟಗಾರರೆಲ್ಲ ಸೇರಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಅರ್ಪಿಸಿದರು. ಅವರನ್ನು ಹೆಗಲ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಬಂದರು. ಇಲ್ಲಿಗೆ ಸಚಿನ್ ಅವರ ವರ್ಣರಂಜಿತ ಕ್ರಿಕೆಟ್ ಬದುಕು ಸಾರ್ಥಕವಾಯಿತು. ಸಚಿನ್ 6ನೇ ಹಾಗೂ ಕೊನೆಯ ವಿಶ್ವಕಪ್ ಆಡಲಿಳಿದಿದ್ದರು. ಪಾಕ್ ಎದುರಿನ ಸೆಮಿಫೈನಲ್‌ನಲ್ಲಿ 85 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ಭಾರತ ರತ್ನ ಪುರಸ್ಕೃತ
24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ ಸಚಿನ್ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.
ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’
ಸಚಿನ್ ಅವರನ್ನು ಚುನಾವಣಾ ಆಯೋಗದ(Election Commission of India) ‘ರಾಷ್ಟ್ರೀಯ ಐಕಾನ್’ ಆಗಿ(National Icon) ನೇಮಿಸಲಾಗಿದೆ. ದೇಶದ ಚುನಾವಣ ಪ್ರಕ್ರಿಯೆಯಲ್ಲಿ ಯುವ ಜನರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಚಿನ್ ಅವರನ್ನು ಐಕಾನ್ ಆಗಿ ಬುಧವಾರ ಚುನಾವಣಾ ಆಯೋಗ ಆಯ್ಕೆ ಮಾಡಿದೆ. ಒಪ್ಪಂದದ ಪ್ರಕಾರ ತೆಂಡೂಲ್ಕರ್ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ ಪ್ರಮಾಣ ಹೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ.