Site icon Vistara News

ICC World Cup 2023 : ಕ್ರಿಕೆಟ್​ ದೇವರು ಸಚಿನ್​ಗೆ ಕ್ರಿಕೆಟ್​​ ವಿಶ್ವಕಪ್​ನ ವಿಶೇಷ ಗೌರವ

Sachin tendulkar

ಬೆಂಗಳೂರು: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು 2023 ರ ಏಕದಿನ ಕ್ರಿಕೆಟ್​ ವಿಶ್ವಕಪ್​​ನ (ICC World Cup 2023) ಜಾಗತಿಕ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತ ಆತಿಥ್ಯ ವಹಿಸಲಿರುವ ವಿಶ್ವಕಪ್ ಗೆ ಸಚಿನ್ ಅವರನ್ನು ಜಾಗತಿಕ ರಾಯಭಾರಿಯಾಗಿ ಹೆಸರಿಸಿರುವುದು ಸೂಕ್ತ ಗೌರವವಾಗಿದೆ. 12 ವರ್ಷಗಳ ಹಿಂದೆ 2011ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಕೊನೆಯ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದ್ದರು.

ಸಚಿತ್​ ತೆಂಡೂಲ್ಕರ್ ಅವರು ತಮ್ಮ ವೃತ್ತಿಜೀವನದಲ್ಲಿ ಆರು 50 ಓವರ್​ಗಳ ಕ್ರಿಕೆಟ್​ ವಿಶ್ವ ಕಪ್​ನಲ್ಲಿ ಕಾಣಿಸಿಕೊಂಡು ಅಪೇಕ್ಷಣೀಯ ದಾಖಲೆಯನ್ನು ಹೊಂಡಿದ್ದಾರೆ. ಹೀಗಾಗಿ ಅವರನ್ನು ಅಂಬಾಸಿಡರ್ ಆಗಿ ಅಯ್ಕೆ ಮಾಡಲಾಗಿದೆ. ಮಾಸ್ಟರ್ ಬ್ಲಾಸ್ಟರ್, ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯಕ್ಕೆ ಮೊದಲು ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ನಡೆಯಲಿದ್ದಾರೆ.

1987 ರಲ್ಲಿ ಬಾಲ್​ ಬಾಯ್​ ಆಗಿ ಕ್ರಿಕೆಟ್ ಪ್ರೀತಿ ಬೆಳೆಸಿದ ದಿನದಿಂದಹಿಡಿದು ಆರು ಆವೃತ್ತಿಗಳಲ್ಲಿ ದೇಶವನ್ನು ಪ್ರತಿನಿಧಿಸುವವರೆಗೆ, ವಿಶ್ವಕಪ್​ ಕ್ರಿಕೆಟ್​ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದ್ದವು. 2011 ರಲ್ಲಿ ವಿಶ್ವಕಪ್ ಗೆದ್ದಿದ್ದು ನನ್ನ ಕ್ರಿಕೆಟ್ ಪ್ರಯಾಣದ ಹೆಮ್ಮೆಯ ಕ್ಷಣವಾಗಿದೆ ಎಂದು ಬ್ರಾಂಡ್ ಅಂಬಾಸಿಡರ್​ ಆದ ಬಳಿಕ ಸಚಿನ್ ತೆಂಡೂಲ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅನೇಕ ತಂಡಗಳು ಮತ್ತು ಆಟಗಾರರು ಕಠಿಣ ಸ್ಪರ್ಧೆಗೆ ಸಜ್ಜಾಗಿದ್ದದಾರೆ. ಈ ಅದ್ಭುತ ಪಂದ್ಯಾವಳಿಯನ್ನು ಉತ್ಸುಕತೆಯಿಂದ ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ.

ವಿಶ್ವಕಪ್​ನಂಥ ಪ್ರಮುಖ ಟೂರ್ನಿಗಳು ಯುವ ಮನಸ್ಸುಗಳಲ್ಲಿ ಕನಸುಗಳನ್ನು ಮೂಡಿಸುತ್ತವೆ/ ಈ ಆವೃತ್ತಿಯು ಯುವ ಮನಸ್ಸುಗಳಿಗೆ ಕ್ರೀಡೆಗಳನ್ನು ತೊಡಗಿಸಿಕೊಳ್ಳಲು ಮತ್ತು ತಮ್ಮ ದೇಶಗಳನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸಲು ಸ್ಫೂರ್ತಿ ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ರಾಯಭಾರಿಗಳ ಪಟ್ಟಿಯಲ್ಲಿ ಇನ್ಯಾರಿದ್ದಾರೆ

ವೆಸ್ಟ್ ಇಂಡೀಸ್​​ನ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆರೋನ್ ಫಿಂಚ್, ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್​ನ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಿಥಾಲಿ ರಾಜ್ ಮತ್ತು ಪಾಕಿಸ್ತಾನದ ಆಲ್​ರೌಂಡರ್​ ಮೊಹಮ್ಮದ್ ಹಫೀಜ್ ಐಸಿಸಿ ರಾಯಭಾರಿಗಳ ಪಟ್ಟಿಯಲ್ಲಿದ್ದಾರೆ. ಇವರೆಲ್ಲರೂ ದೇಶಾದ್ಯಂತ ಆಯ್ದ ಪಂದ್ಯಗಳಿಗೆ ಹಾಜರಾಗಲಿದ್ದಾರೆ, ಇದು ಬಹುನಿರೀಕ್ಷಿತ ವಿಶ್ವಕಪ್​ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದೆ.

ಇದನ್ನೂ ಓದಿ : ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5ರಂದು ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಪ್ರಾರಂಭವಾಗಲಿದೆ. ಒಟ್ಟು 48 ಪಂದ್ಯಗಳು 10 ಸ್ಥಳಗಳಲ್ಲಿ ನಡೆಯಲಿದೆ. ನವೆಂಬರ್ 19 ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Exit mobile version