ಮುಂಬಯಿ: ಟಿ20 ವಿಶ್ವ ಕಪ್(T20 World Cup) ನ ಅರ್ಹತಾ ಪಂದ್ಯಗಳು ನಡೆಯುತ್ತಿರುವ ಬೆನ್ನಲೇ ಈ ಬಾರಿ ಯಾವ ತಂಡ ಕಪ್ ಗೆಲ್ಲಬಹುದು ಎಂಬ ಚರ್ಚೆ ಆರಂಭವಾಗಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಸೆಮಿಫೈನಲ್ಗೇರುವ ನಾಲ್ಕು ಬಲಿಷ್ಠ ತಂಡಗಳನ್ನು ಹೆಸರಿಸಿದ್ದಾರೆ.
ಸಚಿನ್ ಅವರು ಹೆಸರಿಸಿದ ನಾಲ್ಕು ತಂಡಗಳು ಯಾವುದೆಂದು ನೋಡುದಾದರೆ ಮೊದಲ ಸ್ಥಾನದಲ್ಲಿ ಭಾರತ ತಂಡಕ್ಕೆ ಆಧ್ಯತೆ ನೀಡಿದ್ದಾರೆ. “ಭಾರತ ತಂಡ ಈ ಬಾರಿ ಚಾಂಪಿಯನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡ ಎಲ್ಲ ವಿಭಾಗದಲ್ಲಿಯೂ ಸಮತೋಲನದಿಂದ ಕೂಡಿದೆ. ಅಭ್ಯಾಸ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದೆ. ಆದ್ದರಿಂದ ಭಾರತಕ್ಕೆ ಹೆಚ್ಚು ಅವಕಾಶ ಎಂದು ಸಚಿನ್ ಭವಿಷ್ಯ ನುಡಿದಿದ್ದಾರೆ. ಇನ್ನುಳಿದ ಮೂರು ತಂಡಗಳೆಂದರೆ ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳೆಂದು ಹೇಳಿದ್ದಾರೆ.
ಪಾಕಿಸ್ತಾನ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಒಂದೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡಲ್ಲಿ ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಸೆಮಿಫೈನಲ್ಗೇರಬಹುದು ಎಂದರು. ಇನ್ನು ಆಸ್ಟ್ರೇಲಿಯಾಕ್ಕೆ ತವರಿನ ಲಾಭ ಹೆಚ್ಚು ಇರುವುದರಿಂದ ಆಸೀಸ್ ಕೂಡ ಸೆಮಿ ಪ್ರವೇಶಿಸಲಿದೆ ಎಂದು ಸಚಿನ್ ಹೇಳಿದ್ದಾರೆ. ಒಟ್ಟಾರೆ ಸಚಿನ್ ಅವರ ಈ ಭವಿಷ್ಯ ನಿಜವಾಗಲಿದೆಯಾ ಎಂದು ಕಾದು ನೋಡಬೇಕಿದೆ. ಅಕ್ಟೋಬರ್ 22ರಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗುವ ಮೂಲಕ ಟಿ20 ವಿಶ್ವ ಕಪ್ ಸೂಪರ್-12ಗೆ ಚಾಲನೆ ದೊರೆಯಲಿದೆ.
ಇದನ್ನೂ ಓದಿ | T20 World Cup: ಗೆಲುವಿನ ಖಾತೆ ತೆರೆದ ಲಂಕಾ; ಯುಎಇ ವಿರುದ್ಧ 79 ರನ್ ಭರ್ಜರಿ ಜಯ