ಮುಂಬಯಿ: ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ ವಿಶ್ವ ಅಪ್ಪಂದಿರ(Father’s Day) ದಿನ ಎಂದು ಆಚರಿಸಲಾಗುತ್ತದೆ. ಇಂದು ವಿಶ್ವಾದ್ಯಂತ ಅಪ್ಪಂದಿರ ದಿನಾಚರಣೆಯನ್ನು(Happy Father’s Day) ಆಚರಿಸಲಾಗುತ್ತಿದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ.
ಟ್ವಿಟರ್ ಎಕ್ಸ್ನಲ್ಲಿ ತಂದೆ ಮತ್ತಉ ತಾಯಿಯ ಜತೆಗಿನ ಸುಂದರ ಕ್ಷಣದ ಫೋಟೊವನ್ನು ಹಂಚಿಕೊಂಡಿರುವ ಸಚಿನ್, ನನ್ನ ತಂದೆಯ ಪ್ರೀತಿಯ ನೆನಪಿಗಾಗಿ, ಅವರ ನಗು ಪ್ರತಿಯೊಂದು ಕೋಣೆಯನ್ನು ಬೆಳಗಿಸುತ್ತದೆ ಮತ್ತು ಅವರ ಪ್ರೀತಿಯು ಪ್ರತಿ ಕ್ಷಣವೂ ವಿಶೇಷವಾಗಿಸಿತ್ತು. ನಮ್ಮಿಂದ ದೂರ ಆಗಿದ್ದರೂ ಕೂಡ ಆ ಪ್ರೀತಿ ಮಾತ್ರ ಶಾಶ್ವತವಾಗಿದೆ. ತಂದೆಯ ದಿನದ ಶುಭಾಶಯಗಳು, ಬಾಬಾ! ಎಂದು ಬರೆದುಕೊಂಡಿದ್ದಾರೆ.
ಸಚಿನ್ ತನ್ನ ತಂದೆ ರಮೇಶ್ ತೆಂಡೂಲ್ಕರ್ ಅವರ ನೆನಪಿಗಾಗಿ ಪ್ರತಿ ವರ್ಷವೂ ಕೂಡ ತಂದೆಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಕ್ರಿಕೆಟ್ಗೆ ನಿವೃತ್ತಿ ಹೇಳುವ ಸಂದರ್ಭದಲ್ಲಿಯೂ ಸಚಿನ್ ಅವರು ತಮ್ಮ ತಂದೆಯೇ ನನ್ನ ರೋಲ್ ಮಾಡೆಲ್ ಎಂದಿದ್ದರು. ಅವರು ನೀಡಿದ ಬೆಂಬಲದಿಂದ ನಾನು ಕ್ರಿಕೆಟ್ನಲ್ಲಿ ಈ ಎಲ್ಲ ಸಾಧನೆ ಮಾಡಿದೆ ಎಂದಿದ್ದರು.
ಇದನ್ನೂ ಓದಿ Sara Tendulkar: ಲಂಡನ್ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್; ಮಗಳ ಸಾಧನೆ ಕೊಂಡಾಡಿದ ಸಚಿನ್
ತಂದೆಯ ಸಾವಿನ ನೋವಿನ ಮಧ್ಯೆಯೂ ವಿಶ್ವಕಪ್ ಆಡಿದ್ದ ಸಚಿನ್
1999ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡುತ್ತಿದ್ದ ವೇಳೆ ಸಚಿನ್ ಅವರ ತಂದೆ ನಿಧನರಾಗಿದ್ದರು. ತಂದೆ ತೀರಿಕೊಂಡ ನೋವಿನ ಮಧ್ಯೆಯೂ ಮೂರು ದಿನಗಳ ನಂತರ ಸಚಿನ್ ಕೀನ್ಯಾ ವಿರುದ್ಧ 140 ರನ್ ಬಾರಿಸಿದ್ದರು. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನೆದು ಸಚಿನ್ ಭಾವುಕರಾಗಿದ್ದರು. ತಂದೆಯ ಹಠಾತ್ ಸಾವಿನಿಂದ ಸಚಿನ್ ವಿಶ್ವಕಪ್‌ನಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಪೋಹಗಳು ಎದ್ದಿದ್ದವು. ಆದರೆ ವಿಶ್ವಕಪ್‌ನಲ್ಲಿ ಆಡುವುದನ್ನು ಮುಂದುವರೆಸಲು ತಾಯಿ ಒತ್ತಾಯಿಸಿದ ನಂತರ ಸಚಿನ್ ಮೈದಾನಕ್ಕೆ ಇಳಿದಿದ್ದರು.
ಸಚಿನ್ ಅವರು ‘ಸಚಿನ್ ತೆಂಡೂಲ್ಕರ್ ಫೌಂಡೇಶನ್’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ ಸಚಿನ್ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.