ಮುಂಬಯಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್, ಲೆಜೆಂಡರಿ ಕ್ರಿಕೆಟರ್, ಕ್ರಿಕೆಟ್ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಎಪ್ರಿಲ್ 24ರಂದು 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಅವರಿಗೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದರು. ಆದರೆ ಇದೀಗ ಸಚಿನ್ ಅವರು ತಮ್ಮ ಹುಟ್ಟು ಹಬ್ಬ ಆಚರಿಸಿದ ವಿಶೇಷ ಫೋಟೊವೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿನ್ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದಾರೆ. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದಾರೆ. ಸಚಿನ್ ಅವರಿಗೆ ಗೋವಾ ಎಂದರೆ ಅಚ್ಚುಮೆಚ್ಚು, ಹೀಗಾಗಿ ಅವರು ತಮ್ಮ ಸ್ಮರಣೀಯ ಹುಟ್ಟು ಹಬ್ಬವನ್ನು ಗೋವಾದಲ್ಲೇ ಹಳ್ಳಿ ಜೀವನದ ಶೈಲಿಯಲ್ಲಿ ಆಚರಿಸಿದ್ದಾರೆ.
“ಹಳ್ಳಿ ಜೀವನವೆಂದರೆ ಬಲು ಸೊಗಸು. ಇದೇ ಕಾರಣಕ್ಕೆ ನಾನು 50ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡೆ. ಐಪಿಎಲ್ ನಿಮಿತ್ತ ನನ್ನ ಮಗ ಅರ್ಜುನ್ ತೆಂಡೂಲ್ಕರ್ ಈ ಸುಂದರ ಕ್ಷಣದಲ್ಲಿ ನಮ್ಮ ಜತೆ ಇಲ್ಲ ಎಂಬ ಬೇಸರ ಕಾಡಿತು” ಎಂದು ಸಚಿನ್ ಹೇಳಿದರು.
ಇದನ್ನೂ ಓದಿ Sachin Tendulkar: ಶಾರ್ಜಾ ಮೈದಾನದ ಸ್ಟ್ಯಾಂಡ್ಗೆ ಸಚಿನ್ ತೆಂಡೂಲ್ಕರ್ ಹೆಸರು
2020ರಲ್ಲಿ ಹುಟ್ಟುಹಬ್ಬ ಆಚರಿಸದ ಸಚಿನ್!
ಪ್ರತಿ ವರ್ಷವೂ ಸಂಭ್ರಮದೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿದ್ದ ಸಚಿನ್ 2020ರಲ್ಲಿ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರಲಿಲ್ಲ. ಮನೆಯಲ್ಲಿಯೇ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.
24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.