Site icon Vistara News

Sachin Tendulkar: ಮಹಿಳಾ ದಿನಾಚರಣೆಯಂದು ಭಾವುಕ ಕ್ಷಣದ ಫೋಟೊ ಹಂಚಿಕೊಂಡ ಸಚಿನ್‌

Sachin Tendulkar

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಮಾಜಿ ದಿಗ್ಗಜ ಆಟಗಾರ, ಕ್ರಿಕೆಟ್​ ದೇವರು ಎಂದು ಕರೆಯುವ ಸವ್ಯಸಾಚಿ ಸಚಿನ್​ ತೆಂಡೂಲ್ಕರ್(Sachin Tendulkar) ​ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು(women’s day 2024) ಭಾವುಕ ಕ್ಷಣವೊಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಅಂದಿನ ಘಟನೆಯ ಕುರಿತು ಕಿರು ಟಿಪ್ಪಣಿಯನ್ನು ಕೂಡ ಬರೆದುಕೊಂಡಿದ್ದಾರೆ.

“ವರ್ಷಗಳು ಉರುಳಿದಂತೆ ಭಾರತ ಮತ್ತು ಜಗತ್ತಿನಾದ್ಯಂತ ಕ್ರೀಡೆಯಲ್ಲಿ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದು, ಇದು ತುಂಬಾ ಸ್ಫೂರ್ತಿದಾಯಕವಾಗಿದೆ. 26/11ರ ದಾಳಿಯ ನಂತರ, ಭಾರತವು ಇಂಗ್ಲೆಂಡ್ ಎದುರು ಪಂದ್ಯವೊಂದನ್ನು ಜಯಿಸಿತ್ತು ಹಾಗೂ ಇದು ಇಡೀ ದೇಶದ ಪಾಲಿಗೆ ಭಾವುಕ ಕ್ಷಣವಾಗಿತ್ತು. ಈ ಭಾವುಕ ಕ್ಷಣವನ್ನು ನಾನು ಮೊತ್ತಮೊದಲ ಬಾರಿಗೆ ಹಂಚಿಕೊಂಡಿದ್ದು ಮಹಿಳಾ ಮೈದಾನದ ಸಿಬ್ಬಂದಿಯೊಬ್ಬರ ಬಳಿ. ಆ ಕ್ಷಣ ನನ್ನ ಪಾಲಿಗೆ ಇಂದೂ ಕೂಡ ವಿಶೇಷವಾಗಿ ಉಳಿದಿದೆ” ಎಂದು ಸಚಿನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಇಂದು ಮಹಿಳೆಯರು ಸಾಧಿಸುತ್ತಿರುವ ಸಾಧನೆಯನ್ನು ಕೂಡ ಕೊಂಡಾಂಡಿದ್ದಾರೆ.

ಇದನ್ನೂ ಓದಿ Yashasvi Jaiswal: ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

ಇತ್ತೀಚೆಗೆ ಭಾರತದ ಮೊತ್ತ ಮೊದಲ ಮಹಿಳಾ ಪಿಚ್ ಕ್ಯುರೇಟರ್ ಆಗಿ ನೇಮಕಗೊಂಡ ಜಸಿಂತಾ ಕಲ್ಯಾಣ್ ಅವರಿಗೂ ಸಚಿನ್​ ಈ ವೇಳೆ ಹಾರೈಸಿದ್ದಾರೆ. ಜಸಿಂತಾ ಕಲ್ಯಾಣ್ ಅವರು ಹಲವು ಮಹಿಳೆಯರಿಗೆ ಸ್ಫೂರ್ತಿಯಾಗುವ ಮೂಲಕ ಭವಿಷ್ಯದಲ್ಲಿ ಇನ್ನೂ ಹಲವು ಮಹಿಳೆಯರು ಈ ಕ್ಷೇತ್ರಕ್ಕೆ ಬರುವಂತಾಗಲಿ ಎಂದು ಸಚಿನ್​ ಆಶಿಸಿದ್ದಾರೆ.

ಸಚಿನ್​ ಅವರು 24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡಿದ್ದ ಸಚಿನ್​


ಇತ್ತೀಚೆಗೆ ಸಚಿನ್​ ತೆಂಡೂಲ್ಕರ್‌ ಮೊದಲ ಬಾರಿಗೆ ಜಮ್ಮು-ಕಾಶ್ಮೀರ (Jammu Kashmir) ಪ್ರವಾಸ ಕೈಗೊಂಡ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಕಾಶ್ಮೀರದ ಗಲ್ಲಿಗಳಲ್ಲಿ ಕ್ರಿಕೆಟ್‌ ಆಡಿ, ಬ್ಯಾಟ್‌ ತಯಾರಿಕಾ ಘಟಕಕ್ಕೆ ಭೇಟಿ, ದಾಲ್‌ ಸರೋವರದಲ್ಲಿ ಬೋಟಿಂಗ್‌, ಉರಿ ಸೆಕ್ಟರ್‌ನಲ್ಲಿ ಪ್ರವಾಸ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದ ಸಾಲು ಸಾಲು ಫೋಟೊಗಳು, ವಿಡಿಯೊಗಳನ್ನು ಪೋಸ್ಟ್‌ ಮಾಡುವ ಮೂಲಕ ಕಾಶ್ಮೀರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಅಷ್ಟೇ ಅಲ್ಲದೇ ಕಾಶ್ಮೀರ ಪ್ರವಾಸದ ಬಳಿಕ ಸಚಿನ್‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕೂಡ ನೆನೆದಿದ್ದರು.

ಕಾಶ್ಮೀರ ಪ್ರವಾಸದ ಝಲಕ್‌ಗಳಿರುವ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಚಿನ್​, “ಜಮ್ಮು-ಕಾಶ್ಮೀರ ಪ್ರವಾಸದ ಅದ್ಭುತ ಅನುಭವವು ನನ್ನ ಸ್ಮೃತಿಪಟಲದಲ್ಲಿ ಎಂದಿಗೂ ಇರುತ್ತದೆ. ಹಿಮತ ಚಳಿಯ ಮಧ್ಯೆ ಕಾಶ್ಮೀರ ಜನರ ಅದ್ಭುತ ಆತಿಥ್ಯವು ನನ್ನ ಮನಸ್ಸನ್ನು ಬೆಚ್ಚಗಾಗಿಸಿದೆ. ದೇಶದಲ್ಲಿ ನೋಡಬೇಕಾಗಿರುವುದು ತುಂಬ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಟ್ರಿಪ್‌ ಬಳಿಕ ಅವರ ಮಾತನ್ನು ಒಪ್ಪದೇ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

Exit mobile version