ಬೆಂಗಳೂರು: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರಮಾನ್ಯ ಕುಸ್ತಿಪಟುಗಳಿಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ ಇದೊಂದು ಕಳವಳಕಾರಿ ಘಟನೆ ಎಂದು ಹೇಳಿದ್ದಾರೆ.
ಬುಧವಾರ ಟ್ವೀಟ್ ಮಾಡಿರುವ ಉತ್ತಪ್ಪ, “ನಮ್ಮ ದೇಶದ ಕುಸ್ತಿಪಟುಗಳ ವಿಚಾರದಲ್ಲಿ ಏನಾಗುತ್ತಿದೆ. ಅವರ ಪರಿಸ್ಥಿತಿಯನ್ನು ಕಂಡು ತುಂಬಾ ನೋವಾಗಿದೆ. ಯಾವುದೇ ವಿಚಾರವನ್ನಾಗಲಿ ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಲಿ” ಎಂದು ಟ್ವೀಟ್ ಮಾಡುವ ಮೂಲಕ ಭಾನುವಾರ ಪೊಲೀಸರು ಅತ್ಯಂತ ಅಮಾನುಷವಾಗಿ ಕುಸ್ತಿಪಟುಗಳನ್ನು ರಸ್ತೆಗಳಲ್ಲಿ ಎಳೆದಾಡಿ ಬಂಧಿಸಿದ ನಡೆಯನ್ನು ಖಂಡಿಸಿದ್ದಾರೆ.
Saddened to hear about what’s happening with our wrestling heroes. I’m certain there is a better way to have this addressed in a peaceful manner. I pray it happens soon.
— Robin Aiyuda Uthappa (@robbieuthappa) May 31, 2023
ಮಂಗಳವಾರವಷ್ಟೇ ಕನ್ನಡಿಗ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಟ್ವೀಟ್ ಮೂಲಕ ಕುಸ್ತಿಪಟುಗಳಿಗೆ ಬೆಂಬಲಿಸಿದ್ದರು. “ಮೇ 28ರಂದು ನಮ್ಮ ಕುಸ್ತಿಪಟುಗಳ ಮೇಲೆ ಪೊಲೀಸರು ತೋರಿದ ವರ್ತನೆಯನ್ನು ಕಂಡು ತುಂಬಾ ದುಃಖವಾಗಿದೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಶೀಘ್ರ ಪರಿಹಾರಕ್ಕಾಗಿ ಆಶಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ಬಂಧಿಸದಿದ್ದರೆ ಹಾಲು,ತರಕಾರಿ ಪೂರೈಕೆ ಸ್ಥಗಿತ; ಟಿಕಾಯತ್ ಎಚ್ಚರಿಕೆ
ಉಗ್ರ ಹೋರಾಟದ ಎಚ್ಚರಿಕೆ
ಮುಂದಿನ 5 ದಿನಗಳಲ್ಲಿ ಬ್ರಿಜ್ ಭೂಷಣ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಪ್ರತಭಟನಾನಿತರ ಕುಸ್ತಿಪಟುಗಳು ಮತ್ತು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಟಿಕಾಯತ್, ಜೂನ್ 5ರ ಒಳಗಡೆ ಬ್ರಿಜ್ ಭೂಷಣ್ ಅವರ ಬಂಧಿಸಿ ಕುಸ್ತಿಪಟುಗಳಿಗೆ ಸೂಕ್ತ ನ್ಯಾಯ ಒದಗಿಸದಿದ್ದಲ್ಲಿ ದೆಹಲಿ ಸೇರಿ ಇದರ ಗಡಿ ಭಾಗಕ್ಕೂ ಹಾಲು ಮತ್ತು ತರಕಾರಿ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಜೂನ್ 5 ರಂದು ದೆಹಲಿ ಗಡಿ ಘೇರಾವ್ ಹೋರಾಟ ಆರಂಭಿಸುವುದಾಗಿಯೂ ತಿಳಿಸಿದ್ದಾರೆ.