Site icon Vistara News

Impact Fielder: ಉತ್ತಮ ಫೀಲ್ಡಿಂಗ್​ ನಡೆಸಿ ಚಿನ್ನ ಗೆದ್ದ ಸಾಯಿ ಸುದರ್ಶನ್​

sai sudharsan

ಪಾರ್ಲ್​: ದಕ್ಷಿಣ ಆಪ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ತಮಿಳುನಾಡು ಮೂಲಕದ ಸಾಯಿ ಸುದರ್ಶನ್(sai sudharsan)​ ತಮ್ಮ ಚೊಚ್ಚಲ ಸರಣಿಯಲ್ಲೇ ಇಂಪ್ಯಾಕ್ಟ್ ಫೀಲ್ಡರ್(Impact Fielder)​ ಪ್ರಶಸ್ತಿ ಪಡೆದಿದ್ದಾರೆ.

ಗುರುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರು ಅತ್ಯಂತ ಕಷ್ಟಕರವಾದ ಕ್ಯಾಚ್​ ಒಂದನ್ನು ಜಿಗಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಡೇಂಜರಸ್​ ಬ್ಯಾಟರ್​ ಹನ್ರಿಚ್​ ಕ್ಲಾಸೆನ್​ ಅವರ ಕ್ಯಾಚನ್ನು ಕ್ಷಣ ಮಾತ್ರದಲ್ಲಿ ಮುಂದಕ್ಕೆ ಜಿಗಿದು ಹಿಡಿಯುವ ಮೂಲಕ ಗಮನಸೆಳೆದಿದ್ದರು. ಇದು ಪಂದ್ಯದ ಮಹತ್ವದ ತಿರುವು ಕೂಡ ಆಗಿತ್ತು. ಹೀಗಾಗಿ ಅವರಿಗೆ ಬಿಸಿಸಿಐ ಚಿನ್ನದ ಪದಕ ನೀಡುವ ಮೂಲಕ ಅವರನ್ನು ಗೌರವಿಸಿದೆ. ಕಳೆದ ಟಿ20 ಸರಣಿಯಲ್ಲಿ ಮೊಹಮ್ಮದ್​ ಸಿರಾಜ್​ ಅವರು ಇಂಪ್ಯಾಕ್ಟ್ ಫೀಲ್ಡರ್ ಪ್ರಶಸ್ತಿ ಪಡದಿದ್ದರು.

ಸಾಯಿ ಸುದರ್ಶನ್​ ಸಾಧನೆ

ಚೊಚ್ಚಲ ಪಂದ್ಯದಲ್ಲಿ ಮತ್ತು ದ್ವಿತೀಯ ಪಂದ್ಯದಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಬರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆ ಅವರು ಈ ಟೂರ್ನಿಯಲ್ಲಿ 127 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ Most ODI wins: ಆಸ್ಟ್ರೇಲಿಯಾದ ದಾಖಲೆ ಮುರಿದ ಟೀಮ್​ ಇಂಡಿಯಾ

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದಿದ್ದ ಈ ಪಂದ್ಯದಲ್ಲಿ ಚೇಸಿಂಗ್​ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ್ದ ಸಾಯಿ ಸುದರ್ಶನ್ 43 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ ಅಜೇಯ 55 ರನ್​ ಬಾರಿಸಿದ್ದರು. ಅರ್ಧಶತಕ ಪೂರ್ತಿಗೊಳ್ಳುತ್ತಿದ್ದಂತೆ ಭಾರತ ಪರ ಚೊಚ್ಚಲ ಪಂದ್ಯದಲ್ಲೇ ಆರಂಭಿಕ ಆಟಗಾರನಾಗಿ 50 ಪ್ಲಸ್​ ರನ್​ ಬಾರಿಸಿದ 4ನೇ ಆಟಗಾರ ಎನಿಸಿಕೊಂಡರು. ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಮಾತ್ರ ಸುದರ್ಶನ್ ಉತ್ತಮ ಬ್ಯಾಟಿಂಗ್​ ನಡೆಸುವಲ್ಲಿ ಎಡವಿದರು. 10 ರನ್​ ಮಾತ್ರ ಗಳಿಸಿ ವಿಕೆಟ್​ ಒಪ್ಪಿಸಿದರು.

ಸರಣಿ ಗೆದ್ದ ಭಾರತ

ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಭರ್ತಿ 50 ಓವರ್​ ಆಡಿ 8 ವಿಕೆಟ್​ ನಷ್ಟಕ್ಕೆ 297 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಆ ಬಳಿಕ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲು ಮಂಕಾಗಿ 45.5 ಓವರ್​ಗಳಲ್ಲಿ 218 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು ತವರಿನಲ್ಲಿ ಸರಣಿ ಸೋಲಿನ ಕಹಿ ಅನುಭವಿಸಿತು. ಭಾರತ 78 ರನ್​ ಅಂತರದ ಗೆಲುವು ಸಾಧಿಸಿ ಸರಣಿ ಗೆಲುವು ದಾಖಲಿಸಿತು.

ಭಾರತ ತಂಡದ ಗೆಲುವಿನಲ್ಲಿ ಏಕ ದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್ ಮಿಂಚಿದರು. ಅವರು 9 ಓವರ್ ಎಸೆದು 30 ರನ್​ ನೀಡಿ 4 ವಿಕೆಟ್​ ಉರುಳಿಸಿ ಮಿಂಚಿದರು.

Exit mobile version