Site icon Vistara News

Saina Nehwal | ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​; ಟ್ರಯಲ್ಸ್‌ನಿಂದ ಹಿಂದೆ ಸರಿದ ಸೈನಾ, ಮಾಳವಿಕಾ

Asian Mixed Team Championships

ನವದೆಹಲಿ: ದುಬೈನಲ್ಲಿ ನಡೆಯಲಿರುವ ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್(Saina Nehwal) ಮತ್ತು ಮಾಳವಿಕಾ ಬನ್ಸೊದ್‌ ಆಡದಿರಲು ತೀರ್ಮಾನಿಸಿದ್ದಾರೆ. ಈ ಟೂರ್ನಿ ಫೆಬ್ರವರಿ 14ರಿಂದ 19 ವರೆಗೆ ನಡೆಯಲಿದೆ.

ಈ ಟೂರ್ನಿಗಾಗಿ ಮಂಗಳವಾರ(ಜ.3) ನಡೆಯಲಿರುವ ಟ್ರಯಲ್ಸ್‌ಗೆ ಸೈನಾ ನೆಹ್ವಾಲ್‌, ಆಕರ್ಷಿ ಕಶ್ಯಪ್‌ ಮತ್ತು ಮಾಳವಿಕಾ ಬನ್ಸೊದ್‌ ಅವರ ಹೆಸರನ್ನು ಬಿಎಐ ಅಂತಿಮಗೊಳಿಸಿತ್ತು. ಸಿಂಗಲ್ಸ್‌ ವಿಭಾಗದಲ್ಲಿ ಪಿ.ವಿ.ಸಿಂಧು ನೇರ ಪ್ರವೇಶ ಗಿಟ್ಟಿಸಿದ್ದು, ಎರಡನೇ ಆಟಗಾರ್ತಿಯ ಆಯ್ಕೆಗೆ ಟ್ರಯಲ್ಸ್‌ ನಡೆಸಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಆದರೆ ಸೈನಾ ಮತ್ತು ಮಾಳವಿಕಾ ಹಿಂದೆ ಸರಿದಿದ್ದಾರೆ. ‘ಟ್ರಯಲ್ಸ್‌ಗೆ ತಾವು ಲಭ್ಯವಿಲ್ಲ ಎಂದು ಉಭಯ ಆಟಗಾರ್ತಿಯರೂ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಗೆ (ಬಿಎಐ) ಮಾಹಿತಿ ನೀಡಿದ್ದಾರೆ. ಹಾಗಾಗಿ ಅಶ್ಮಿತಾ ಚಾಲಿಹಾ ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿದ್ದೇವೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ಈ ಇಬ್ಬರು ಆಟಗಾರ್ತಿಯರ ಹೊರತಾಗಿಯೂ ಇನ್ನೂ ಕೆಲವು ಸ್ಪರ್ಧಿಗಳು ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಬಿಎಐ ಮೂಲಗಳು ಹೇಳಿವೆ. ಆದರೆ ಯಾವ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ.

ವಿಶ್ವ ಶ್ರೇಯಾಂಕದ ಆಧಾರದಲ್ಲಿ ಆಯ್ಕೆ ಸಮಿತಿಯು ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ ಸೇನ್‌, ಎಚ್‌.ಎಸ್‌.ಪ್ರಣಯ್, ಸಿಂಧು ಹಾಗೂ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರಿಗೆ ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ನೇರ ಪ್ರವೇಶ ನೀಡಿದೆ. ಜತೆಗೆ ಇವರ ಮೇಲೆ ಪದಕ ಭರವಸೆ ಇರಿಸಲಾಗಿದೆ.

Exit mobile version