Site icon Vistara News

ಪ್ರತಿಕೂಲ ಹವಾಮಾನದ ಮಧ್ಯೆಯೂ ಅಮರನಾಥ ಯಾತ್ರೆ ಪೂರ್ಣಗೊಳಿಸಿದ ಸೈನಾ ನೆಹ್ವಾಲ್

saina nehwal in Amarnath Yatra

ನವದೆಹಲಿ: ಪ್ರತಿಕೂಲ ಹವಾಮಾನದ ಮಧ್ಯೆಯೂ ಭಾರತದ ಸ್ಟಾರ್​ ಒಲಿಂಪಿಯನ್​ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್(Saina Nehwal)​ ಅವರು ತಮ್ಮ ತಾಯಿಯೊಂದಿಗೆ ಅಮರನಾಥ ಯಾತ್ರೆ(Amarnath Yatra) ಪೂರ್ಣಗೊಳಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಅವರು ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದ ಅಮರನಾಥ ಯಾತ್ರೆ ಹಲವು ಬಾರಿ ರದ್ದುಗೊಂಡಿದ್ದು. ಹಲವು ಯಾತ್ರಾತ್ರಿಗಳು ಸಂಕಷ್ಟದಲ್ಲಿ ಸಿಲುಕಿ ಅವರನ್ನು ಹೆಲಿಕಾಪ್ಟರ್​ ಮೂಲಕ ಸುರಕ್ಷಿತ ಸ್ಥಳಕ್ಕೂ ಕೆರೆತರಲಾಗಿತ್ತು. ಸೈನಾ ಅವರು ತಮ್ಮ ತಾಯಿಯೊಂದಿಗೆ ಯಾತ್ರೆ ಕೈಗೊಂಡಿದ್ದರು. ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರ ಯಾತ್ರೆ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಸೈನಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತಮ್ಮ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸೈನಾ ಅವರು, ‘ಈ ಯಾತ್ರೆ ಸಾಕಾರಗೊಳ್ಳಲು ಸರ್ಕಾರ ಸಾಕಷ್ಟು ನೆರವು ನೀಡಿತು. ಜತೆಗೆ ದೆವಾಲಯದ ಮಂಡಳಿಯೂ ನಮಗೆ ದರ್ಶನ ಮಾಡಿಸಲು ಸಹಕರಿಸಿತು. ದೇವರ ದರ್ಶನದಿಂದ ಪುನೀತನಾಗಿದ್ದೇನೆ. ತಾಯಿಯೊಂದಿಗೆ ಭೋಲೆನಾಥನ ದರ್ಶನ ಪಡೆದಿರುವುದು ನನ್ನ ಅದೃಷ್ಟ. ನಮಗೆ ಸಹಾಯ ಮಾಡಿದ ಅಮರನಾಥ ದೇಗುಲ ಮಂಡಳಿ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಹೇಳಬಯಸುತ್ತೇನೆ. ಈ ಯಾತ್ರೆ ಸಂಪನ್ನಗೊಂಡಿದ್ದು ಸಂತೃಪ್ತಿ ತಂದಿದೆ’ ಎಂದಿದ್ದಾರೆ.

ಬುಧವಾರ 9155 ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಜುಲೈ 1ರಿಂದ ಒಟ್ಟು 146508 ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಬುಧವಾರ ಭೇಟಿ ನೀಡಿದ ಯಾತ್ರಾರ್ಥಿಗಳಲ್ಲಿ 6995 ಪುರುಷರು, 1918 ಮಹಿಳೆಯರು, 122 ಮಕ್ಕಳು ಮತ್ತು 120 ಸಾಧುಗಳು ಸೇರಿದ್ದರು.

ಇದನ್ನೂ ಓದಿ Malaysia Open Badminton| ಬ್ಯಾಡ್ಮಿಂಟನ್​; ಮೊದಲ ಸುತ್ತಿನಲ್ಲೇ ಸೋಲು ಕಂಡ ಸೈನಾ ನೆಹ್ವಾಲ್​, ಕೆ. ಶ್ರೀಕಾಂತ್​

ಇತ್ತೀಚಿನ ಕೆಲ ವರ್ಷಗಳಿಂದ ಸೈನಾ ನೆಹ್ವಾಲ್​ ಅವರು ಗಾಯದ ಸಮಸ್ಯೆಯಿಂದ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಯಾವುದೇ ಟೂರ್ನಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಕಷ್ಟಪಟ್ಟು ಮೊದಲ ಸುತ್ತು ದಾಟುವುದೇ ದೊಡ್ಡ ಸಾಧನೆಯಾಗಿದೆ. ಮುಂದಿನ ವರ್ಷ ಪ್ಯಾರಿಸ್​ ಒಲಿಂಪಿಕ್ಸ್​ ಕೂಟಕ್ಕೆ ಅವರು ಅರ್ಹತೆ ಪಡೆಯುವುದು ಕೂಡ ಸದ್ಯಕ್ಕೆ ಕಷ್ಟಕರ ಎನ್ನುವಂತಿದೆ.

Exit mobile version