ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮೇಲಿನ ಅಮಾನತು ಆದೇಶವನ್ನು ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ಹಿಂಪಡೆದ ಬೆನ್ನಲ್ಲೇ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್(Sakshi Malik) ಮತ್ತು ಬಜರಂಗ್ ಪೂನಿಯ(Bajrang Punia) ತಮ್ಮ ಪ್ರತಿಭಟನೆಯನ್ನು(Wrestlers Protest) ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಫೆಡರೇಶನ್‌ನ ಅಧ್ಯಕ್ಷ ಸಂಜಯ್ ಸಿಂಗ್ ಅವರು ಮೋಸದ ವಿಧಾನ ಅನುಸರಿಸಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಇದು ನಿಜವಾದರೆ ಡಬ್ಲ್ಯುಎಫ್‌ಐ ವಿರುದ್ಧ ಮತ್ತೆ ತಮ್ಮ ಪ್ರತಿಭಟನೆ ಮುಂದುವರಿಯುವುದಾಗಿ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಂಗಳವಾರ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯು ಡಬ್ಲ್ಯು ಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್ ಮೇಲಿನ ತಾತ್ಕಾಲಿಕ ಅಮಾನತನ್ನು ಹಿಂಪಡೆದಿತ್ತು. ಜತೆಗೆ ಒಂದು ಷರತ್ತನ್ನೂ ವಿಧಿಸಿತ್ತು. ಬಜರಂಗ್ ಪೂನಿಯ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ವಿರುದ್ಧ ಯಾವುದೇ ಕಠಿನ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಲಿಖೀತ ಭರವಸೆ ನೀಡಬೇಕೆಂದು ಸೂಚಿಸಿತ್ತು.
“ಅಮಾನತು ಆದೇಶ ಹಿಂಪಡೆಯುವ ನಿಟ್ಟಿನಲ್ಲಿ ಸಂಜಯ್ ಸಿಂಗ್ ಅವರು ಮೋಸದ ವಿಧಾನ ಅನುಸರಿಸಿದ್ದಾರೆ. ಒಂದು ವೇಳೆ ಬ್ರಿಜ್ ಭೂಷಣ್ ಮತ್ತು ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್‌ಐನ ವ್ಯವಹಾರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರೆ ನಾವು ಪ್ರತಿಭಟನೆ ಆರಂಭಿಸದೇ ಬೇರೆ ಮಾರ್ಗವಿಲ್ಲ’ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
“ನಾನು ಕುಸ್ತಿ ಸ್ಪರ್ಧೆಯಿಂದ ನಿವೃತ್ತಿ ಯಾಗಿರಬಹುದು. ಆದರೆ ಬ್ರಿಜ್ ಭೂಷಣ್ ಮತ್ತು ಅವರ ಆಪ್ತರು ಫೆಡರೇಶನ್ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಸಾಕ್ಷಿ ಹೇಳಿದರು.
ಚುನಾವಣೆ ಮರು ನಿಗದಿಗೆ ಆದೇಶ
ಡಬ್ಲ್ಯುಎಫ್ಐನ ಅಥ್ಲೀಟ್ಗಳ ಆಯೋಗದ ಚುನಾವಣೆಗಳನ್ನು ಮರು ನಿಗದಿಪಡಿಸಬೇಕಾಗುತ್ತದೆ. ಮತ್ತು ಅಭ್ಯರ್ಥಿಗಳು ಸಕ್ರಿಯ ಕ್ರೀಡಾಪಟುಗಳಾಗಿರಬೇಕು ಅಥವಾ ನಾಲ್ಕು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಿವೃತ್ತಿಯಾಗುವಂತಿರಬಾರದು. ಹೆಚ್ಚುವರಿಯಾಗಿ, ಡಬ್ಲ್ಯುಎಫ್ಐ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸುವಾಗ ಯಾವುದೇ ಕುಸ್ತಿಪಟು ತಾರತಮ್ಯವನ್ನು ಎದುರಿಸುವುದಿಲ್ಲ ಎಂದು ಡಬ್ಲ್ಯುಎಫ್ಐ ಅಂತರರಾಷ್ಟ್ರೀಯ ಸಂಸ್ಥೆಗೆ ಲಿಖಿತ ಖಾತರಿ ನೀಡಬೇಕು ಎಂದು ಅದು ಹೇಳಿದೆ. ಅಮಾನತು ತೆಗೆದುಹಾಕುವುದರಿಂದ, ಭಾರತೀಯ ಕುಸ್ತಿಪಟುಗಳು ಈಗ ಯುಡಬ್ಲ್ಯೂಡಬ್ಲ್ಯೂ ಧ್ವಜದ ಬದಲು ತಮ್ಮ ರಾಷ್ಟ್ರಧ್ವಜದ ಅಡಿಯಲ್ಲಿ ಸ್ಪರ್ಧಿಸಬಹುದು. ಅವರು ಮುಂದಿನ ಯುಡಬ್ಲ್ಯೂಡಬ್ಲ್ಯೂ ಕೂಟದಿಂದ ಈ ಅವಕಾಶ ಸಿಗಲಿದೆ.
ಮಾಜಿ ಅಧ್ಯಕ್ಷ ಮತ್ತು ಲೈಗಿಂಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷನ್ ಶರಣ್ ಸಿಂಗ್ ಆಪ್ತರಾಗಿರುವ ಸಂಜಯ್ ಸಿಂಗ್ ಅವರು ಭಾರತೀಯ ಕುಸ್ತಿ ಒಕ್ಕೂಟಕ್ಕೆ ಅಧ್ಯಕ್ಷರಾದ ಕಾರಣ ಇದನ್ನು ವಿರೋಧಿಸಿ ಸಾಕ್ಷಿ ಸಿಂಗ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಭಜರಂಗ್ ಪೂನಿಯಾ ಪದ್ಮಶ್ರೀ ಪ್ರಶ್ತಿಯನ್ನು, ವಿನೇಶ್ ಫೋಗಟ್ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದರು.