Site icon Vistara News

Asian Games: ನೇರ ಪ್ರವೇಶ, ಕುಸ್ತಿಪಟುಗಳ ಮಧ್ಯೆ ಒಗ್ಗಟ್ಟು ಮುರಿಯುವ ಹುನ್ನಾರ; ಸಾಕ್ಷಿ ಮಲಿಕ್​ ಆರೋಪ

Indian wrestler sakshi malik

ನವದೆಹಲಿ: ಏಷ್ಯನ್‌ ಕ್ರೀಡಾಕೂಟಕ್ಕೆ(Asian Games) ಬಜರಂಗ್ ಪೂನಿಯಾ(Bajrang Punia) ಮತ್ತು ವಿನೇಶ್​ ಫೋಗಟ್(Vinesh Phogat) ಅವರನ್ನು ಟ್ರಯಲ್ಸ್ ಇಲ್ಲದೇ ಆಯ್ಕೆ ಮಾಡಿರುವ ವಿಚಾರವಾಗಿ ಸಾಕ್ಷಿ ಮಲಿಕ್(sakshi malik) ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಕುಸ್ತಿಪಟುಗಳ ನಡುವಿನ ಒಗ್ಗಟ್ಟು ಮುರಿಯುವ ಹುನ್ನಾರವಾಗಿದೆ ಎಂದಿದ್ದಾರೆ.

ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಲ್ಲಿ ಸಾಕ್ಷಿ ಮಲಿಕ್​ ಕೂಡ ಒಬ್ಬರಾಗಿದ್ದರು. ಆದರೆ ಇವರನ್ನು ಹೊರತುಪಡಿಸಿ ಅವರ ಜತೆಗೆ ಪ್ರತಿಭಟನೆ ನಡೆಸಿದ್ದ ಬಜರಂಗ್ ಪೂನಿಯಾ(65 ಕೆ.ಜಿ.) ಮತ್ತು ವಿನೇಶಾ ಫೋಗಟ್(53 ಕೆ.ಜಿ.) ಅವರಿಗೆ ಏಷ್ಯನ್​ ಗೇಮ್ಸ್(Asian Games 2023)​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಯಾವುದೇ ಟ್ರಯಲ್ಸ್​ ಇಲ್ಲದೆ ಸ್ಪರ್ಧಿಸುವಂತೆ ಮಂಗಳವಾರ ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿ ನಿರ್ಧಾರ ಪ್ರಕಟಿಸಿತ್ತು. ಈ ವಿಚಾರವಾಗಿ ಕಿರಿಯ ಕುಸ್ತಿಪಟುಗಳು ಕೋರ್ಟ್​ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಪ್ರತಿಭಟನೆಯನ್ನೂ ಮಾಡತೊಡಗಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಸಾಕ್ಷಿ ಮಲಿಕ್​ ಇದು ಕುಸ್ತಿಪಟುಗಳ ಮಧ್ಯೆ ಇರುವ ಒಗ್ಗಟ್ಟು ಮುರಿಯುವ ಕುತಂತ್ರ. ನಾನಂತೂ ಟ್ರಯಲ್ಸ್‌ ಇಲ್ಲದೇ ನೇರ ಅವಕಾಶ ಕೊಡುವಂತೆ ಕೇಳಿಲ್ಲ. ಅಡ್‌ಹಾಕ್ ಸಮಿತಿಯು ನೇರ ಅರ್ಹತೆ ನೀಡುವುದಾಗಿ ಹೇಳಿದಾಗಲೂ ನಾನೇ ತಿರಸ್ಕರಿಸಿದ್ದೆ. ಆದರೆ ಅಭ್ಯಾಸಕ್ಕಾಗಿ ಸಮಯಾವಕಾಶ ಕೇಳಿದ್ದು ಸತ್ಯ ಎಂದಿದ್ದಾರೆ.

ಇದನ್ನೂ ಓದಿ ಬಜರಂಗ್,ವಿನೇಶ್​ ಏಷ್ಯನ್​ ಗೇಮ್ಸ್​ಗೆ ನೇರ ಪ್ರವೇಶ; ಕೋಚ್​ಗಳಿಂದ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ

‘ಕಳೆದ ಕೆಲ ದಿನಗಳೀಂದ ವಿನೇಶ್ ಮತ್ತು ಬಜರಂಗ್​ ನೇರ ಪ್ರವೇಶದ ಕುರಿತು ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಕುಸ್ತಿಪಟುಗಳ ವಲಯದಲ್ಲಿ ಒಡಕು ಮೂಡಿಸಿ ಈ ಮೂಲಕ ನಮ್ಮ ಮಧ್ಯೆಯೇ ನಂಬಿಕೆ ಇಲ್ಲದಂತೆ ಮಾಡಿ ಮುಂದಿನ ದಿನಗಳಲ್ಲಿ ಸಮಸ್ಯೆಯಾದಗ ಇದನ್ನು ಪ್ರತಿಭಟಿಸುವಾಗ ಬೆಂಬಲ ಸಿಗದಂತೆ ಮಾಡಲು ಈ ರೀತಿ ಮಾಡಲಾಗಿದೆ. ಟ್ರಯಲ್ಸ್‌ಗೆ ನಾನು ವಿರುದ್ಧವಾಗಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಏಕೆಂದರೆ ಟೂರ್ನಿಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಎಲ್ಲರು ಕಠಿಣ ಶ್ರಮ ವಹಿಸಿರುತ್ತಾರೆ. ಈ ರೀತಿಯ ನಿರ್ಧಾರದಿಂದ ಅನೇಕ ಕುಸ್ತಿಪಟುಗಳ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ’ ಎಂದು ಸಾಕ್ಷಿ ಹೇಳಿದ್ದಾರೆ.

Exit mobile version