ನವ ದೆಹಲಿ : ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಶಿಸ್ತು ಎಂದಿಗೂ ಇರಲಿಲ್ಲ. ಆಂತರಿಕ ಕಲಹ ಹಾಗೂ ಶೀತಲ ಸಮರ ಮಾಮೂಲು. ಶಿಸ್ತು ಹಾಗೂ ಸಂಯಮವೂ ಇಲ್ಲ. ಇದಕ್ಕೆ ಪೂರಕವಾದ ಘಟನೆಗಳು ಆಗಾಗ ನಡೆಯುತ್ತಿದ್ದವು. ತೀರಾ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಈ ಮಾತಿಗೆ ಸಾಕ್ಷಿ ಒದಗಿಸುತ್ತಿವೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ವಾಸಿಮ್ ಅಕ್ರಮ್ (Wasim Akram) ಅವರ ಆತ್ಮ ಚರಿತ್ರೆ “ಸುಲ್ತಾನ್: ಎ ಮೊಮೈರ್’ . ಅದರಲ್ಲಿ ಅವರು ತಂಡದಲ್ಲಿದ್ದ ಒಂದೊಂದು ಹುಳುಕುಗಳನ್ನು, ಅನರ್ಥಗಳನ್ನು ಎತ್ತಿ ತೋರಿಸಿದ್ದಾರೆ. ಅದರಲ್ಲೊಂದು ಅಧ್ಯಾಯದಲ್ಲಿ ಪಾಕಿಸ್ತಾನ ಮಾಜಿ ನಾಯಕ ಸಲೀಮ್ ಮಲಿಕ್ ತಮ್ಮನ್ನು ಹೇಗೆ ನಡೆಸಿಕೊಂಡಿದ್ದರು ಎಂಬುದನ್ನು ಬರೆದುಕೊಂಡಿದ್ದಾರೆ. ಪ್ರತಿ ಬಾರಿಯೂ ಸೇವಕನಂತೆ ನೋಡಿಕೊಂಡರು. ಅವರ ಬಟ್ಟೆಯನ್ನೂ ತೊಳೆಸಿದ್ದರು ಎಂದು ಆರೋಪಿಸಿದ್ದಾರೆ.
ವಾಸಿಮ್ ಅಕ್ರಮ್ ಅವರು ೧೯೮೪ರಲ್ಲಿ ಪಾಕಿಸ್ತಾನ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲದೆ, ೧೯೯೨ರಿಂದ ೯೫ರವರೆಗೆ ಸಲೀಮ್ ಮಲಿಕ್ ಅವರ ನಾಯಕತ್ವದಲ್ಲಿ ಆಡಿದ್ದರು. ತಮಗಿಂತ ಹಿರಿಯರಾಗಿದ್ದ ಸಲೀಮ್ ಅವರು ತಂಡದಲ್ಲಿ ತಮ್ಮ ಮೇಲೆ ಮಾಡುತ್ತಿದ್ದ ದಬ್ಬಾಳಿಕೆಯನ್ನು ಆತ್ಮ ಚರಿತ್ರೆಯಲ್ಲಿ ಬಿಡಿಬಿಡಿಯಾಗಿ ವಿವರಿಸಿದ್ದಾರೆ ವಾಸಿಮ್ ಅಕ್ರಮ್.
“ಅವರು ತಮ್ಮ ಹಿರಿತನವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಪ್ರತಿ ಬಾರಿಯೂ ನಕಾರಾತ್ಮಕ ಯೋಚನೆ ಮಾಡುತ್ತಿದ್ದರು. ಮಲಿಕ್ ಸ್ವಾರ್ಥಿ ಹಾಗೂ ನನ್ನನ್ನು ಪರಿಚಾರಕನ ರೀತಿ ನೋಡಿಕೊಂಡರು. ಅವರಿಗೆ ನಾನು ಮಸಾಜ್ ಮಾಡಬೇಕಾಗಿತ್ತು. ಅವರ ಬಟ್ಟೆಯನ್ನು ನಾನು ತೊಳೆದುಕೊಡಬೇಕಾಗಿತ್ತು. ಶೂ ಪಾಲಿಶ್ ಮಾಡಬೇಕಾಗಿತ್ತು. ಅದೇ ರೀತಿ ಕಿರಿಯ ಆಟಗಾರರಾದ ರಮೀಜ್ ರಾಜಾ, ತಾಹಿರ್, ಮೊಹ್ಸಿನ್, ಶೋಯೆಬ್ ಮೊಹಮ್ಮದ್ ನನ್ನನ್ನು ನೈಟ್ ಕ್ಲಬ್‌ಗೆ ಕರೆಯುವಾಗಲೂ ನಾನು ಸಿಟ್ಟಾಗುತ್ತಿದ್ದೆ,” ಎಂಬುದಾಗಿ ಅಕ್ರಮ್ ಬರೆದುಕೊಂಡಿದ್ದಾರೆ.
ಸಲೀಮ್ ಮಲಿಕ್ ತಮ್ಮ ನಾಯಕತ್ವದ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅವರ ನೇತೃತ್ವದಲ್ಲಿ ೧೨ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಪಾಕ್ ತಂಡ ಏಳರಲ್ಲಿ ಗೆಲುವು ಸಾಧಿಸಿತ್ತು. ಆ ಬಳಿಕ ಮಲಿಕ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಆಜೀವನ ನಿಷೇಧಕ್ಕೆ ಒಳಗಾಗಿದ್ದರು.
ಇದನ್ನೂ ಓದಿ ವ| Pak vs Eng | ಸರಣಿಯ ನಡುವೆ ಎದೆ ನೋವು ಉಂಟಾಗಿ ಅಸ್ವಸ್ಥಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್