ಕಿಂಗ್ಸ್‌ಟೌನ್: ಅತ್ಯಾಚಾರ ಪ್ರಕರಣ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಟಿ20 ವಿಶ್ವಕಪ್ ಆಡಲಿಳಿದ ನೇಪಾಳ ತಂಡದ ಪ್ರಮುಖ ಸ್ಪಿನ್ನರ್ ಸಂದೀಪ್ ಲಮಿಚಾನೆ(Sandeep Lamichhane) ಅವರು ಟಿ20 ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಡಿಮೆ ಪಂದ್ಯಗಳನ್ನಾಡಿ 100 ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್(fastest bowler to 100 T20I wickets) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸೋಮವಾರ ಬಾಂಗ್ಲಾದೇಶ(BAN vs NEP) ವಿರುದ್ಧದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ 2 ವಿಕೆಟ್ ಪಡೆಯುವ ಮೂಲಕ ವೇಗವಾಗಿ 100 ವಿಕೆಟ್ ಕಿತ್ತ ಮೈಲುಗಲ್ಲು ನಿರ್ಮಿಸಿದರು. ವಿಶ್ವ ದಾಖಲೆ ಅಫಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್(Rashid Khan) ಹೆಸರಿನಲ್ಲಿದೆ. ರಶೀದ್ 53 ಪಂದ್ಯಗಳಿಂದ 100 ವಿಕೆಟ್ ಕಿತ್ತಿದ್ದಾರೆ. ಲಮಿಚಾನೆ 54 ಪಂದ್ಯ ಆಡಿ 100 ವಿಕೆಟ್ ಪೂರ್ತಿಗೊಳಿಸಿದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ಲಮಿಚಾನೆಗೆ ಯುಎಸ್ ವೀಸಾ ಲಭಿಸುವುದು ವಿಳಂಬವಾಗಿತ್ತು. ಹೀಗಾಗಿ ಅವರು ಆರಂಭಿಕ ಪಂದ್ಯಳಲ್ಲಿ ಆಡುವ ಅವಕಾಶ ಕಳೆದುಕೊಂಡರು.
ಟಿ20ಯಲ್ಲಿ ವೇಗವಾಗಿ 100 ವಿಕೆಟ್ ಕಿತ್ತ ಬೌಲರ್ಗಳು
ರಶೀದ್ ಖಾನ್-53 ಪಂದ್ಯ
ಸಂದೀಪ್ ಲಮಿಚಾನೆ-54 ಪಂದ್ಯ
ಹ್ಯಾರಿಸ್ ರೌಫ್- 71 ಪಂದ್ಯ
ಮಾರ್ಕ್ ಅಡೇರ್-72 ಪಂದ್ಯ
ಬಿಲಾಲ್ ಖಾನ್-72 ಪಂದ್ಯ
ಲಸಿತ್ ಮಾಲಿಂಗ-76 ಪಂದ್ಯ
ಸಂದೀಪ್ ಲಮಿಚಾನೆ ಅವರು 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಮರು ವಿಚಾರಣೆ ನಡೆಸಿದ ನೇಪಾಳ ಹೈಕೋರ್ಟ್(Nepal High Court) ಕಳೆದ ತಿಂಗಳಷ್ಟೇ ಲಮಿಚಾನೆ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು.
ಇದನ್ನೂ ಒದಿ Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್
ಏನಿದು ಪ್ರಕರಣ?
2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.
2022ರಲ್ಲಿ ಲಾಮಿಚಾನೆ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಿದ್ದರು. ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳು ಜೈಲಿನಲ್ಲಿದ್ದರು.