Site icon Vistara News

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sandeep Lamichhane

ಕಠ್ಮಂಡು: 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ(Sandeep Lamichhane)ಗೆ ದೊಡ್ಡ ರಿಲೀಫ್​ ಸಿಕ್ಕಿದೆ. ನೇಪಾಳ ಹೈಕೋರ್ಟ್(Nepal High Court) ನಿರಪರಾಧಿ ಎಂದು ಘೋಷಿಸಿದೆ.

ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಇದೀಗ ದೋಷಮುಕ್ತರಾಗಿದ್ದಾರೆ.

ಮಂಗಳವಾರ ಮತ್ತು ಬುಧವಾರ (ಮೇ 14 ಮತ್ತು 15) ನಡೆದ ಕೋರ್ಟ್ ಕಲಾಪದ ನಂತರ, ನ್ಯಾಯಾಲಯವು ಸಂದೀಪ್ ಲಮಿಚಾನೆ ಅವರ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್ ನ್ಯಾಯಾಧೀಶರಾದ ಸುದರ್ಶನ್ ದೇವ್ ಭಟ್ಟ ಮತ್ತು ಅಂಜು ಉಪೇತ್ರಿ ಅವರು ಲಮಿಚಾನೆ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಲಮಿಚಾನೆ ಪರವಾಗಿ ಹಿರಿಯ ವಕೀಲರಾದ ರಾಮ್ ನಾರಾಯಣ ಬಿದರಿ, ರಾಮನ್ ಶ್ರೇಷ್ಠ, ಶಂಬು ಥಾಪಾ, ಮುರಾರಿ ಸಪ್ಕೋಟ ಮತ್ತು ಕೃಷ್ಣ ಸಪ್ಕೋಟ ತಮ್ಮ ವಾದವನ್ನು ಮಂಡಿಸಿದರು.

ಇದನ್ನೂ ಓದಿ 8 ವರ್ಷ ಜೈಲು ಶಿಕ್ಷೆ ಬೆನ್ನಲ್ಲೇ ಲಮಿಚಾನೆ ಅಮಾನತುಗೊಳಿಸಿದ ನೇಪಾಳ ಕ್ರಿಕೆಟ್ ಸಂಸ್ಥೆ

ವಿಶ್ವಕಪ್​ನಲ್ಲಿ ಅವಕಾಶ


ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಇದೀಗ ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup) ತಂಡಕ್ಕೆ ಲಭ್ಯವಾಗಿದ್ದಾರೆ ಎನ್ನಲಾಗಿದೆ. ನೇಪಾಳ ತನ್ನ ತಂಡವನ್ನು ಈಗಾಗಲೇ ಘೋಷಿಸಿದ್ದರೂ ಕೂಡ ಮೇ 25 ರವರೆಗೆ ತಂಡದಲ್ಲಿ ಆಟಗಾರರ ಬದಲಾವಣೆಗೆ ಅವಕಾಶವಿರುವ ಕಾರಣ ಲಾಮಿಚಾನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಏನಿದು ಪ್ರಕರಣ?

2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

2022ರಲ್ಲಿ ಲಾಮಿಚಾನೆ ಅವರು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ಗೆ ಹಾಜರುಪಡಿಸಿದ್ದರು.

ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್​ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್​ ಅವರಿಗೆ ಜಾಮೀನು ನೀಡಿತ್ತು. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್​ ಕೂಡ ಪಡೆದುಕೊಂಡಿತ್ತು. ಕಳೆದ ವರ್ಷ ಜನವರಿ 12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್​ ಕೂಡ ಆಡುತ್ತಿದ್ದರು.

ಐಪಿಎಲ್​ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್​ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.

Exit mobile version