ಕಠ್ಮಂಡು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ(Sandeep Lamichhane) ಅವರ ಕ್ರಿಕೆಟ್ ಬದುಕು ಮುಕ್ತಾಯ ಕಂಡತೆ ತೋರುತ್ತಿದೆ. ನೇಪಾಳ ಕ್ರಿಕೆಟ್ ಸಂಸ್ಥೆಯು(ಸಿಎಎನ್) ಅವರನ್ನು ಅಮಾನತುಗೊಳಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ, ಶಿಕ್ಷೆಗೆ ಗುರಿಯಾಗಿರುವ ಲಮಿಚಾನೆಯನ್ನು ತಕ್ಷಣ ಜಾರಿಗೆ ಬರುವಂತೆ ಎಲ್ಲ ರೀತಿಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ ಎಂದು ಸಿಎಎನ್(Cricket Association of Nepal) ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಕಠ್ಮಂಡು ಜಿಲ್ಲಾ ನ್ಯಾಯಾಲಯವು 23ರ ಹರೆಯದ ಕ್ರಿಕೆಟಿಗ ಲಮಿಚಾನೆಗೆ ಬುಧವಾರ 8 ವರ್ಷಗಳ ಜೈಲು ಶಿಕ್ಷೆಯಲ್ಲದೆ, 3 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ಆದೇಶಿಸಿತ್ತು. ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಲಮಿಚಾನೆ ಹೈಕೋರ್ಟ್ ಮೊರೆ ಹೋಗಲು ಉದ್ದೇಶಿಸಿದ್ದಾರೆ ಎಂದು ಸಂದೀಪ್ ಪರ ವಕೀಲ ಸರೋಜ್ ಹೇಳಿದ್ದಾರೆ.
ಇದನ್ನೂ ಓದಿ Sandeep Lamichhane: ಅತ್ಯಾಚಾರ ಸಾಬೀತು; ಸ್ಟಾರ್ ಕ್ರಿಕೆಟಿಗನಿಗೆ 8 ವರ್ಷ ಜೈಲು
2022ರಲ್ಲಿ ಲಾಮಿಚಾನೆ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಮೇಲೆ ಅತ್ಯಾಚಾರದ ದೂರು ದಾಖಲಾದ ಬಳಿಕವೂ ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಿದ್ದರು.
ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್ ಕೂಡ ಪಡೆದುಕೊಂಡಿತ್ತು.
ಕಳೆದ ವರ್ಷ ಜನವರಿ 12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್ ಕೂಡ ಆಡುತ್ತಿದ್ದರು. ದೇಶಕ್ಕಾಗಿ ಹಲವಾರು ಪಂದ್ಯಾವಳಿಗಳಲ್ಲಿ ಆಡುತ್ತಿದ್ದರು. ಇದೀಗ ಆರೋಪದಲ್ಲಿ ದೋಷಿ ಆದ ಕಾರಣ ಮುಂದೆ ಕ್ರಿಕೆಟ್ ಆಡಲು ಸಾಧ್ಯವಾಗಲಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. 2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.
ಜೈಲಿನಿಂದ ಹೊರ ಬಂದ ಬಳಿಕ ಸಂದೀಪ್ ಅವರು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದರು. ಈ ಕುರಿತ ಟ್ವೀಟ್ ಮಾಡಿದ್ದ ಅವರು ನಾನು ಅಮಾಯಕ ಹಾಗೂ ನ್ಯಾಯಾಲಯದ ಬಗ್ಗೆ ಸಂಪೂರ್ಣ ಭರವಸೆಯಿದೆ. ನನ್ನ ಮೇಲೆ ಮಾಡಿರುವ ನಿರಾಧಾರ ಆರೋಪಗಳಿಗೆ ಉತ್ತರಿಸಲು ನಾನು ಸಿದ್ಧ. ಸೂಕ್ತ ನ್ಯಾಯ ದೊರೆಯುವ ಭರವಸೆಯಿದೆ ಎಂದು ಹೇಳಿದ್ದರು. ಆದರೆ ಇದೀಗ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.