Site icon Vistara News

Sania Mirza | ದುಬೈ ಚಾಂಪಿಯನ್​ಶಿಪ್​ ಬಳಿಕ ಸಾನಿಯಾ ಮಿರ್ಜಾ ಟೆನಿಸ್​ಗೆ ವಿದಾಯ!

Sania Mirza

ಮುಂಬಯಿ: ಭಾರತದ ಸ್ಟಾರ್​ ಟೆನಿಸ್ ತಾರೆ, ವಿಶ್ವದ ಮಾಜಿ ಅಗ್ರ ಶ್ರೇಯಾಂಕದ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಲು ಸಿದ್ಧರಾಗಿದ್ದಾರೆ. ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆಯಲಿರುವ ಡಬ್ಲ್ಯುಟಿಎ 1000 ಟೂರ್ನಿ ಬಳಿಕ ವಿದಾಯ ಹೇಳುವುದಾಗಿ ಅವರು ತಿಳಿಸಿದ್ದಾರೆ.

ಶನಿವಾರ ಡಬ್ಲ್ಯುಟಿಎ ನಡೆಸಿದ ಸಂದರ್ಶನದಲ್ಲಿ ಸಾನಿಯಾ ಮಿರ್ಜಾ ತಮ್ಮ ನಿವೃತ್ತಿ ವಿಚಾರವನ್ನು ಖಚಿತಪಡಿಸಿದ್ದಾರೆ. “ದುಬೈ ಚಾಂಪಿಯನ್​ಶಿಪ್​ ತನ್ನ ಕೊನೆಯ ಟೆನಿಸ್​ ಪಂದ್ಯಾವಳಿಯಾಗಿದೆ. ನನಗೆ ಈಗ 36 ವರ್ಷ ವಯಸ್ಸಾಗಿದೆ. ದೇಹ ಸರಿಯಾಗಿ ಸಹಕರಿಸುತ್ತಿಲ್ಲ. ಈ ಮುಖ್ಯ ಕಾರಣದಿಂದಾಗಿ ನಾನು ಟೆನಿಸ್​ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ” ಎಂದು ಸಾನಿಯಾ ಮಿರ್ಜಾ ಸ್ಪಷ್ಟಪಡಿಸಿದ್ದಾರೆ.

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನನ್ನ ಸ್ವಂತ ನಿರ್ಧಾರಗಳ ಮೇಲೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಟೆನಿಸ್​ ವೃತ್ತಿ ಬದುಕಿನಲ್ಲಿ ಹಲವು ದಿಗ್ಗಜ ಆಟಗಾರರೊಂದಿಗೆ ಆಡಿದ ಸಂತಸವಿದೆ” ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಜತೆಗೆ ನಿವೃತ್ತಿ ಬಳಿಕದ ಯೋಜನೆಯನ್ನು ವಿವರಿಸಿದ್ದಾರೆ.

ನಿವೃತ್ತಿಯ ಬಳಿಕ ಸಾನಿಯಾ ಮಿರ್ಜಾ ಏನು ಮಾಡಲಿದ್ದೇನೆ ಎಂಬುದಕ್ಕೂ ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿಯ ನಂತರ ದುಬೈನಲ್ಲಿರುವ ಟೆನಿಸ್​ ಅಕಾಡೆಮಿಯತ್ತ ಗಮನ ಹರಿಸಲು ಬಯಸುತ್ತೇನೆ ಎಂದಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್​ ವೃತ್ತಿ ಬದುಕಿನಲ್ಲಿ ಡಬಲ್ಸ್‌ನಲ್ಲಿ 3 ಮತ್ತು ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.

ಆಸ್ಟ್ರೇಲಿಯಾ ಓಪನ್​ನಲ್ಲಿ ಸ್ಪರ್ಧೆ

ಸಾನಿಯಾ ಮಿರ್ಜಾ ಅವರು 2022ರ ಕೊನೆಯಲ್ಲಿಯೇ ಯುಎಸ್​ ಓಪನ್​ ಆಡಿದ ಬಳಿಕ ಟೆನಿಸ್​ನಿಂದ ನಿವೃತ್ತಿ ಹೊಂದಲು ಬಯಸಿದ್ದರು. ಆದರೆ ಮೊಣಕೈ ಗಾಯದಿಂದಾಗಿ ಯುಎಸ್ ಓಪನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದೀಗ ದುಬೈ ಚಾಂಪಿಯನ್​ಶಿಪ್​ನಲ್ಲಿ ಆಡುವ ಮೂಲಕ ಟೆನಿಸ್​ಗೆ ವಿದಾಯ ಹೇಳಲಿದ್ದಾರೆ. ಆದರೆ ಇದಕ್ಕೂ ಮುನ್ನ ನಡೆಯಲಿರುವ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್​ನಲ್ಲಿ ಆಡಲಿದ್ದಾರೆ.

ಇದನ್ನೂ ಓದಿ | Sania Mirza | ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲೆಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾನಿಯಾ ಮಿರ್ಜಾ

Exit mobile version