ಹೈದರಾಬಾದ್: ದುಬೈ ಟೆನಿಸ್ ಚಾಂಪಿಯನ್‌ಶಿಪ್ ಟೂರ್ನಿಯ ಮೂಲಕ ವೃತ್ತಿಪರ ಟೆನಿಸ್ಗೆ ವಿದಾಯ ಹೇಳಿದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈಗ ತಮ್ಮ ತವರು ಹೈದರಾಬಾದ್‌ನಲ್ಲಿ ವಿದಾಯ ಪ್ರದರ್ಶನ ಪಂದ್ಯ ಆಡಲಿದ್ದಾರೆ.
ಭಾನುವಾರ(ಮಾರ್ಚ್ 5) ಇಲ್ಲಿನ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ಸಾನಿಯಾ ಮಿರ್ಜಾ ತಮ್ಮ ತವರಿನ ಅಭಿಮಾನಿಗಳ ಮುಂದೆ ಕೊನೆಯ ವಿದಾಯದ ಪಂದ್ಯ ಆಡಲಿದ್ದಾರೆ. ಈ ಪಂದ್ಯ ನೋಡಲು ನಟ ದುಲ್ಕರ್ ಸಲ್ಮಾನ್ ಸೇರಿದಂತೆ ಹಲವು ನಟ ನಟಿಯರು ಆಗಮಿಸಿದ್ದಾರೆ.
ಪಂದ್ಯ ಆಡುವುದಕ್ಕೂ ಮುನ್ನ ಮಾತನಾಡಿದ ಸಾನಿಯಾ ಮಿರ್ಜಾ, “18-20 ವರ್ಷಗಳ ಹಿಂದೆ ನಾನು ಟೆನಿಸ್ ಆಡಲು ಪ್ರಾರಂಭಿಸಿದ ಇದೇ ಸ್ಥಳದಲ್ಲಿ ಇಂದು ನನ್ನ ಕೊನೆಯ ಟೆನಿಸ್ ಪಂದ್ಯ ಆಡಲಿದ್ದೇನೆ. ನನ್ನೆಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳ ಮುಂದೆ ಕೊನೆಯ ಬಾರಿಗೆ ಆಡುತ್ತೇನೆ” ಎಂದು ಹೇಳಿ ಭಾವುಕರಾದರು.
ಇದನ್ನೂ ಓದಿ WPL 2023: ಆರ್ಸಿಬಿ ಬಲಿಷ್ಠ ತಂಡ; ಸಾನಿಯಾ ಮಿರ್ಜಾ ವಿಶ್ವಾಸ
ಸಾನಿಯಾ ಮಿರ್ಜಾ ಎರಡು ಪ್ರದರ್ಶನ ಪಂದ್ಯಗಳನ್ನು ಆಡಲಿದ್ದಾರೆ. ಈ ಪೈಕಿ ಮೊದಲ ಪಂದ್ಯದಲ್ಲಿ ನಟರು, ಕ್ರಿಕೆಟಿಗರಾದ ಯುವರಾಜ್ ಸಿಂಗ್ ಸೇರಿದಂತೆ ಹಲವು ಟೆನಿಸ್ ಆಟಗಾರರು ಭಾಗವಹಿಸುವರು. ಎರಡು ತಂಡಗಳಲ್ಲಿ ಒಂದನ್ನು ಸಾನಿಯಾ ಮಿರ್ಜಾ ಮುನ್ನಡೆಸಿದರೆ, ಇನ್ನೊಂದನ್ನು ತಂಡವನ್ನು ಭಾರತದ ಮತ್ತೋರ್ವ ಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ ಮುನ್ನಡೆಸಲಿದ್ದಾರೆ.