ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಅವರಿಗೆ ವಿಚ್ಚೇದನ ನೀಡಿದ ಬಳಿಕ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೊ ಹಂಚಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ‘ಪ್ರತಿಬಿಂಬ’ ಎಂದು ಬರೆದುಕೊಂಡಿದ್ದಾರೆ. ಇದು ಅವರ ಜೀವನದ ಹಲವು ಅರ್ಥಗಳನ್ನು ವ್ಯಕ್ತಪಡಿಸಿದಂತಿದೆ.
ಕಳೆದ ಶನಿವಾರದಂದು ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಈ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು. ಶೋಯೆಬ್ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿತ್ತು.
ಇದನ್ನೂ ಓದಿ Shoaib Malik: ಮೂರನೇ ಮದುವೆಯಾದ ಶೋಯೆಬ್ ಮಲಿಕ್ ಕಾಲೆಳೆದ ಶಾಹೀದ್ ಅಫ್ರಿದಿ
ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಕೂಡ ಪಿಟಿಐಗೆ ಪ್ರತಿಕ್ರಿಕೆ ನೀಡುವ ವೇಳೆ, “ನನ್ನ ಮಗಳು ಮಲಿಕ್ಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ” ಎಂದು ಹೇಳಿದ್ದರು.
— Imran Mirza (@imrandomthought) January 21, 2024
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ಅವರು ಭಾರತದಲ್ಲೇ ನೆಲೆಸಿದ್ದಾರೆ.
2023ರ ಆಸ್ಟ್ರೇಲಿಯನ್ ಓಪನ್ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
2004ರ ವರ್ಷದಲ್ಲಿ ಸಾನಿಯಾ ಮಿರ್ಜಾ ವೃತ್ತಿಪರವಾದ ಟೆನಿಸ್ ಆಡಲು ಆರಂಭ ಮಾಡಿದಾಗ, ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿ ಕೋರ್ಟಿಗೆ ಇಳಿದಾಗ ಆಕೆಯ ಮೇಲೆ ಕಾಮಾಲೆ ಕಣ್ಣಿನ ಸಂಪ್ರದಾಯವಾದಿಗಳು ಫತ್ವಾ ಹೊರಡಿಸಿ ಮುಗಿಬಿದಿತ್ತು. ಅವರು ಪರ್ದಾ ಹಾಕಲು ನಿರಾಕರಣೆ ಮಾಡಿದಾಗ, ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ಮದುವೆಯಾದಾಗ ಹಲವರು ಅವರನ್ನು ʻಪಾಕಿಸ್ಥಾನದ ಸೊಸೆ’ ಎಂದು ಮೂಗು ಮುರಿದದ್ದೂ ಇದೆ! ಈಗ ಅವರು ಮಲಿಕ್ ಅವರಿಂದ ದೂರವಾಗಿದ್ದಾರೆ.