ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಈಗಾಗಲೇ ದುಬೈ ಓಪನ್ ಬಳಿಕ ಟೆನಿಸ್ಗೆ ವಿದಾಯ ಹೇಳುವುದಾಗಿ ಪ್ರಕಟಿಸಿದ್ದಾರೆ. ಇದೀಗ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಜನವರಿ 16ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿ ತನ್ನ ವೃತ್ತಿಜೀವನದ ಕಟ್ಟಕಡೆಯ ಗ್ರ್ಯಾನ್ ಸ್ಲಾಮ್ ಟೂರ್ನಿಯಾಗಿರಲಿದೆ ಎಂದು ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಟೆನಿಸ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಘಟನೆ ಮತ್ತು ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಾನಿಯಾ ಮಿರ್ಜಾ ಭಾವನಾತ್ಮ ಪತ್ರವನ್ನು ಪ್ರಕಟಿಸಿದ್ದಾರೆ. “30 ವರ್ಷಗಳ ಹಿಂದೆ ಹೈದರಾಬಾದ್‌ನ ಆರು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಟೆನಿಸ್ ಕೋರ್ಟ್‌ಗೆ ಹೋಗಿದ್ದಳು. ಆಗ ಅಲ್ಲಿದ್ದ ಕೋಚ್ ಒಬ್ಬರು ಟೆನಿಸ್ ಹೇಗೆ ಆಡಲಾಗುತ್ತದೆ ಎನ್ನುವುದನ್ನು ವಿವರಿಸಿದ್ದರು. ಅಂದು ನಾನು ಟೆನಿಸ್ ಕಲಿಯಲು ತುಂಬಾ ಚಿಕ್ಕವಳು ಎಂದು ಭಾವಿಸಿದ್ದೆ. ಆದರೆ ನನ್ನ ಕನಸುಗಳ ಹೋರಾಟವು ಆರನೇ ವರ್ಷದಲ್ಲಿಯೇ ಪ್ರಾರಂಭವಾಗಿತ್ತು” ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಓಪನ್ನಲ್ಲಿಯೇ ಗ್ರ್ಯಾನ್ ಸ್ಲಾಮ್ ಪಯಣ ಆರಂಭ ಮತ್ತು ಅಂತ್ಯ
2005 ರಲ್ಲಿ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ನನ್ನ ಗ್ರ್ಯಾನ್ ಸ್ಲಾಮ್ ಪ್ರಯಾಣ ಪ್ರಾರಂಭವಾಯಿತು. ಇದೀಗ ಈ ಟೂರ್ನಿಯ ಮೂಲಕವೇ ಗ್ರ್ಯಾನ್ ಸ್ಲಾಮ್ ಟೂರ್ನಿಗೆ ತರೆ ಎಳೆಯುತ್ತಿದ್ದೇನೆ. ಇದಂಕ್ಕಿಂತ ನನ್ನ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸಲು ಅತ್ಯಂತ ಪರಿಪೂರ್ಣವಾದ ಗ್ರ್ಯಾನ್ ಸ್ಲಾಮ್ ಟೂರ್ನಿ ಮತ್ತೊಂದಿಲ್ಲ ಎಂದು ಭಾವಿಸಿದ್ದೇನೆ. ಇದೀಗ 18 ವರ್ಷಗಳ ನಂತರ ನನ್ನ ಕೊನೆಯ ಆಸ್ಟ್ರೇಲಿಯನ್ ಓಪನ್ ಮತ್ತು ಫೆಬ್ರವರಿಯಲ್ಲಿ ದುಬೈ ಓಪನ್‌ನಲ್ಲಿ ಆಡಲು ತಯಾರಾಗುತ್ತಿರುವ ಬಗ್ಗೆ ನನ್ನಲ್ಲಿ ಅನೇಕ ಭಾವನೆಗಳು ಮಿನುಗುತ್ತಿವೆ. ನನ್ನ ಟೆನಿಸ್ ಬಾಳ್ವೆಯಲ್ಲಿ ಕಳೆದ 20 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾದ ಎಲ್ಲ ಸಾಧನೆ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಜೀವನದುದ್ದಕ್ಕೂ ನನ್ನೊಂದಿಗೆ ಕೊಂಡೊಯ್ಯುವ ದೊಡ್ಡ ಸ್ಮರಣೆಯೆಂದರೆ ಅದು ಪ್ರತಿ ಬಾರಿ ನಾನು ವಿಜಯವನ್ನು ಸಾಧಿಸಿದಾಗ ನನ್ನ ದೇಶವಾಸಿಗಳು ಮತ್ತು ಬೆಂಬಲಿಗರ ಮುಖದಲ್ಲಿ ನಾನು ಕಂಡ ಹೆಮ್ಮೆ ಮತ್ತು ಸಂತೋಷ ಎಂದು ಅವರು ಹೇಳಿದರು.
ಎಲ್ಲರಿಗೂ ಚಿರಋಣಿ
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ನನ್ನ ಪೋಷಕರು ಮತ್ತು ನನ್ನ ಕುಟುಂಬ, ನನ್ನ ಕೋಚ್, ಫಿಸಿಯೋ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ನಗು, ಕಣ್ಣೀರು, ನೋವು, ನಲಿವುಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಂಡಿದ್ದೇನೆ. ಅದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಿದಕ್ಕೆ ಎಂದಿಗೂ ಚಿರಋಣಿ ಎಂದು ಸಾನಿಯ ಮಿರ್ಜಾ ಭಾವನಾತ್ಮ ಪತ್ರವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ | Sania Mirza | ದುಬೈ ಚಾಂಪಿಯನ್ಶಿಪ್ ಬಳಿಕ ಸಾನಿಯಾ ಮಿರ್ಜಾ ಟೆನಿಸ್ಗೆ ವಿದಾಯ!