ಹೈದರಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ನಡುವಣ 13 ವರ್ಷದ ದಾಂಪತ್ಯವು ಕೊನೆಗೊಂಡಿದೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿದೆ.
ಶನಿವಾರದಂದು ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹದ ಫೋಟೊ ಹಂಚಿಕೊಂಡು ಸಾನಿಯಾ ಮಿರ್ಜಾ ಜತೆಗಿನ ದಾಂಪತ್ಯ ಕೊನೆಗೊಂಡ ವಿಚಾರ ಬಹಿರಂಗವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಾನಿಯಾ–ಶೋಯೆಬ್ ದಾಂಪತ್ಯ ಜೀವನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಇದೀಗ ಈ ಬಗ್ಗೆ ಸಾನಿಯಾ ಮಿರ್ಜಾ ಅವರ ಕುಟುಂಬ ಎಲ್ಲ ಗೊಂದಲಕ್ಕೆ ತೆರೆ ಎಳೆದಿದೆ.
“ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಕಣ್ಣುಗಳಿಂದ ದೂರವಿಟ್ಟಿದ್ದಾರೆ. ಶೋಯೆಬ್ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ. ಶೋಯೆಬ್ ಅವರ ಹೊಸ ದಾಂಪತ್ಯ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ. ಯಾವುದೇ ಊಹಾಪೋಹಗಳಿಗೆ ತಲೆಗೆಡಿಸಿಕೊಳ್ಳದೆ ಅವರ ಗೌಪ್ಯತೆಯ ಜೀವನವನ್ನು ಗೌರವಿಸುವಂತೆ ನಾವು ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ವಿನಂತಿಸುತ್ತೇವೆ” ಎಂದು ಸಾನಿಯಾ ಕುಟುಂಬ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ ಸಾನಿಯಾ ಮಿರ್ಜಾ ಡಿವೋರ್ಸ್ ಬಗ್ಗೆ ತಂದೆ ಇಮ್ರಾನ್ ಹೇಳಿದ್ದೇನು? ಇಲ್ಲಿದೆ ಅಸಲಿ ಸತ್ಯ!
— Imran Mirza (@imrandomthought) January 21, 2024
ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಪಿಟಿಐಗೆ ಪ್ರತಿಕ್ರಿಕೆ ನೀಡಿ, “ನನ್ನ ಮಗಳು ಮಲಿಕ್ಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ” ಎಂದು ಶನಿವಾರ ಹೇಳಿದ್ದರು.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ.
ಶೋಯೆಬ್ ಮಲಿಕ್ ಹಾಗೂ ಪಾಕಿಸ್ತಾನದ ನಟಿ ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಇದಕ್ಕೂ ಮೊದಲು ಕೇಳಿಬಂದಿದ್ದವು. ಆದರೆ, ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್ ಮಲಿಕ್ ಆಗಲಿ, ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೀಗ, ಶೋಯೆಬ್ ಮಲಿಕ್ ಅವರು ಸನಾ ಜಾವೇದ್ ಅವರನ್ನು ಮದುವೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.